ನನ್ನ ಚಿತ್ರ ರಂಗದ ಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜತೆಗಿದ್ದರು, ಅವರಿಗೆ ನಾನು ಬೆಂಬಲ ಕೊಡುತ್ತೇನೆ ; ಜಂಟಿ ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ – ಕಹಳೆ ನ್ಯೂಸ್
ಬೆಂಗಳೂರು: ನನ್ನ ಚಿತ್ರ ರಂಗದ ಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜತೆಗಿದ್ದರು, ಅವರಿಗೆ ನಾನು ಬೆಂಬಲ ಕೊಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಬುಧವಾರ ಹೇಳಿಕೆ ನೀಡಿದ್ದಾರೆ.
ವಿಧಾನ ಸಭಾ ಚುನಾವಣೆಯ ಕಾವು ಏರಿರುವ ವೇಳೆಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತನಾಡಿದರು.
”ನನ್ನ ಕಷ್ಟಕಾಲದಲ್ಲಿ ಜತೆಗಿದ್ದರು. ಅವರು ಯಾವ ಪಕ್ಷ ಎಂದು ನಾನು ನೋಡುವುದಿಲ್ಲ. ನನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದವರು ಯಾವುದೇ ಪಕ್ಷದವರಾಗಿದ್ದರು ಅವರ ಜತೆ ನಿಲ್ಲುತ್ತೇನೆ ಎಂದರು. ಬೊಮ್ಮಾಯಿಯವರಿಗೆ ನನ್ನ ಬೆಂಬಲ. ಇದು ಕಟು ಸತ್ಯ. ನಾನು ಅಗತ್ಯ ಬಿದ್ದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ, ಎಲ್ಲ ಕಡೆಗೆ ಹೋಗುತ್ತೇನೆ ಅನ್ನುವುದಕ್ಕೆ ಆಗುವುದಿಲ್ಲ” ಎಂದರು.
ಖ್ಯಾತ ನಟ ಪ್ರಕಾಶ್ ರಾಜ್ ಅವರ ”ಸುದೀಪ್ ಅವರು ಮಾರಿಕೊಳ್ಳುವ ವ್ಯಕ್ತಿಯಲ್ಲ” ಎಂದು ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ”ಅವರು ದೊಡ್ಡ ನಟ ಅವರೊಂದಿಗೆ ನಾನು ಮುಂದಿನ ಚಿತ್ರ ಯಾವಾಗ ಮಾಡುವುದು ಎಂದು ಕಾಯುತ್ತಿದ್ದೇನೆ” ಎಂದರು.
ಅನಿವಾರ್ಯವಾಗಿ ನಾನು ಚುನಾವಣೆಗೆ ನಿಲ್ಲುವವನಲ್ಲ, ಗಟ್ಟಿ ನಿಲುವು ತೆಗೆದುಕೊಂಡು ಬರುವವನು,ಬಹಿರಂಗವಾಗಿ ಹೇಳುತ್ತೇನೆ ಎಂದರು.’ಹಣ ಮಾಡಲು ನಾನು ಇಲ್ಲಿಗೆ ಬರಬೇಕಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ಐಟಿ ದಾಳಿ ವಿಚಾರದಲ್ಲಿ ಒತ್ತಡ ದಿಂದ ಈ ನಿರ್ಧಾರ ಕೈಗೊಂಡಿದ್ದೀರಾ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ಐಟಿ ದಾಳಿ ಆಗಿತ್ತು, ಏನೂ ಸಿಗದೇ ವಾಪಾಸಾಗಿದ್ದರು. ನಾನು ಒತ್ತಡದಿಂದ ನಿರ್ಧಾರ ಕೈಗೊಳ್ಳುವವನೇ’ ಎಂದು ನಗೆಯಾಡಿದರು.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ”ಸುದೀಪ್ ಅವರದ್ದು ಮತ್ತು ನನ್ನ ಸಂಬಂಧ ಬೇರೆ, ಅವರು ರಾಜಕೀಯ ಪಕ್ಷಕ್ಕೆ ಸೇರಿಲ್ಲ. ನಿಮಗೋಸ್ಕರ ಬೆಂಬಲ ಕೊಡುತ್ತೇನೆ ಎಂದಿದ್ದಾರೆ. ನಿಮಗೋಸ್ಕರ ನಾನು ಕೆಲಸ ಮಾಡಲು ಸಿದ್ದನಿದ್ದೇನೆ.ಎಂದು ಹೇಳಿದ್ದಾರೆ. ಅವರ ಈ ನಿರ್ಧಾರದಿಂದ ರಾಜ್ಯದ ಎಲ್ಲೆಡೆ ವಿದ್ಯುತ್ ಸಂಚಲನವಾಗಿದೆ”ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಆರ್.ಅಶೋಕ್, ಮುನಿರತ್ನ, ಡಾ. ಸುಧಾಕರ್ ಹಾಜರಿದ್ದರು.