Thursday, January 23, 2025
ದಕ್ಷಿಣ ಕನ್ನಡಸುದ್ದಿ

ಕೆದಂಬಾಡಿ ರಾಮಯ್ಯ ಗೌಡರ ವಿಷಯ ಶೀಘ್ರ ಪಠ್ಯವಾಗಲಿ : ಸಂಸ್ಮರಣ ದಿನಾಚರಣೆ – ರಾಜ್ಯ ಶೌರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ – ಕಹಳೆ ನ್ಯೂಸ್

ಮಂಗಳೂರು: ಕೇವಲ ಕಟ್ಟಡಗಳ ನಿರ್ಮಾಣದಿಂದ ಪ್ರಯೋಜನವಿಲ್ಲ, ಬದಲಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಂತಹ ಪರಾಕ್ರಮಿಗಳ ಹಾಗೂ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ವಿಚಾರವನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿದಾಗ ಅದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುವ ಭರವಸೆ ಇದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ನಡೆದ ಸಂಸ್ಮರಣ ದಿನಾಚರಣೆ – ರಾಜ್ಯ ಶೌರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶವಿತ್ತರು.

ಬಾವುಟಗುಡ್ಡೆಯಲ್ಲಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ಅವರಿಗೆ ಗೌರವ ಸಂದಿದೆ. ಕೆದಂಬಾಡಿ ರಾಮಯ್ಯ ಗೌಡ ಹಾಗೂ ಅವರ ಹೆಸರಿನ ಶೌರ್ಯ ಪ್ರಶಸ್ತಿ ಪಡೆದ ಏಕನಾಥ ಶೆಟ್ಟಿ ಅವರು ಸಮಾಜಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದವರು, ಅಂತಹ ಮಹಾತ್ಮರ ನೆನಪಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಆಶೀರ್ವಚನ ನೀಡಿದ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಕೆದಂಬಾಡಿ ಅವರ ಪ್ರತಿಮೆಯನ್ನು ಸ್ಥಾಪಿಸಿರುವುದು ದೇಶಕ್ಕೆ ಹೆಮ್ಮೆಯ ವಿಷಯ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಹಾಗೂ ತುಳುವಿಗೆ ರಾಜ್ಯ ಭಾಷೆಯ ಮಾನ್ಯತೆ ಶೀಘ್ರ ದೊರೆಯುವಂತಾಗಲಿ ಎಂದರು.

ಮುಸ್ಲಿಂ ಧರ್ಮಗುರು ಯು.ಕೆ. ಅಬ್ದುಲ್‌ ಅಝೀಝ್ ದಾರಿಮಿ ಮಾತನಾಡಿ, ನಾವು ಹುಟ್ಟಿ ಬೆಳೆದ ಮಣ್ಣಿಗೆ ಎಂದೆಂದಿಗೂ ಗೌರವ ಸಲ್ಲಿಸಬೇಕು. ಕೆದಂಬಾಡಿ ರಾಮಯ್ಯ ಗೌಡ ಅವರು ತಮ್ಮ ಬದುಕೇ ಮಣ್ಣಿನ ಗೌರವ ರಕ್ಷಣೆಗಾಗಿ ಎಂದು ಸಾರಿದ್ದಾರೆ ಎಂದರು.

ಏಕನಾಥ ಶೆಟ್ಟಿಯವರಿಗೆ ಶೌರ್ಯ ಪ್ರಶಸ್ತಿ
ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿಯನ್ನು ಭಾರತೀಯ ಭೂ ಸೇನೆಯ ನಿವೃತ್ತ ಯೋಧ, 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ಅಂಡಮಾನ್‌ಗೆ ತೆರಳುತ್ತಿದ್ದ ವಾಯುಸೇನೆಯ ವಿಮಾನದಲ್ಲಿದ್ದ ಸುಬೇದಾರ್‌ ಏಕನಾಥ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಅವರ ಪತ್ನಿ ಜಯಂತಿ ಶೆಟ್ಟಿ ಹಾಗೂ ಮಕ್ಕಳು ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಜಯಂತಿ ಶೆಟ್ಟಿ ಮಾತನಾಡಿ, ಕೆದಂಬಾಡಿ ರಾಮಯ್ಯ ಗೌಡ ಹಾಗೂ ನನ್ನ ಪತಿ ಏಕನಾಥ ಶೆಟ್ಟಿ ಇಬ್ಬರೂ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಏಕನಾಥ ಶೆಟ್ಟಿ ಅವರದ್ದು “ಪರಿಭಾವಿತ ಮರಣ’ ಎಂದು ಸೇನೆ ಹೇಳಿದೆ. ಅವರಿಲ್ಲದಿದ್ದರೂ ಮನೆಯಲ್ಲಿ ಅವರ ಶಿಲಾಪ್ರತಿಮೆ ನಿರ್ಮಿಸಿ ಅವರ ನೆನಪಿನಲ್ಲಿ ಬದುಕು ನಡೆಸುತ್ತಿದ್ದೇವೆ ಎಂದರು.

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸುಳ್ಯದ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಉದ್ಘಾಟಿಸಿ ಶುಭ ಹಾರೈಸಿದರು. ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ವಿ. ತೀರ್ಥರಾಮ, ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್‌ ರೈ ಮಾಲಾಡಿ, ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್‌ ನಿಟ್ಟೆಗುತ್ತು ಶರತ್‌ ಭಂಡಾರಿ, ತುಳುನಾಡ ರಕ್ಷಣ ವೇದಿಕೆ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಎಂ.ಬಿ. ಕಿರಣ್‌ ಬುಡ್ಲೆಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಸಂಚಾಲಕ ಭಾಸ್ಕರ್‌ ದೇವಸ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಪುತ್ತಿಲ ಪ್ರಶಸ್ತಿ ಪತ್ರ ವಾಚಿಸಿದರು. ಕೋಶಾಧಿಕಾರಿ ಶಿವರಾಮ ಗೌಡ ನಿನ್ನಿಕಲ್‌ ವಂದಿಸಿದರು. ಉಪಾಧ್ಯಕ್ಷ ಪಿ.ಎಚ್‌.ಆನಂದ್‌ ನೆರಿಯ, ಸಂಘಟನ ಕಾರ್ಯದರ್ಶಿ ಅಕ್ಷಯ್‌ ಕುರುಂಜಿ, ಚಂದ್ರ ಕೋಲ್ಚಾರ್‌, ಕುಶಾಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸುಷ್ಮಿತಾ ಕಡಪಳ ನಿರೂಪಿಸಿದರು.