ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಲ್ಲವ ಮುಖಂಡ ಪದ್ಮರಾಜ್ ಆರ್‌ಗೆ ಅದೃಷ್ಟ ; ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ..! ಜೆ.ಆರ್.ಲೋಬೋ, ಐವನ್ ಡಿ’ಸೋಜಾಗೆ ಕೈ ತಪ್ಪಿದ ಅವಕಾಶ..!? – ಕಹಳೆ ನ್ಯೂಸ್
ಮಂಗಳೂರು/ಉಡುಪಿ: ದ.ಕ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿನ ಆಕಾಂಕ್ಷಿಗಳು ತಮ್ಮೆಲ್ಲ ಪಟ್ಟುಗಳನ್ನೂ ಪ್ರಯೋಗಿಸುತ್ತಿದ್ದು ಉನ್ನತ ನಾಯಕರು ದಿಲ್ಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಆಕಾಂಕ್ಷಿಗಳಾದ ಮೊದಿನ್ ಬಾವಾ, ಐವನ್ ಡಿ’ಸೋಜಾ, ಪದ್ಮರಾಜ್ ಆರ್. ಮುಂತಾದವರು ದಿಲ್ಲಿಯಲ್ಲೇ ಪ್ರಯತ್ನಶೀಲರಾಗಿದ್ದಾರೆ. ಆದರೂ ಹೈಕಮಾಂಡ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಪದ್ಮರಾಜ್ ಆರ್‌ಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ :
ಒಂದೆಡೆ ಮಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಹೆಚ್ಚಿರುವ ಪೈಪೋಟಿ ಇನ್ನೊಂದೆಡೆ ಜಾತಿ ಲೆಕ್ಕಾಚಾರ ಪಟ್ಟಿ ಬಿಡುಗಡೆ ವಿಳಂಬ ವಾಗಲು ಕಾರಣ. ಇತ್ತೀಚೆಗಿನ ವರ್ಷಗಳಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದವರಿಗೆ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವರ ಪುತ್ರ ನಿವೇದಿತ್ ಆಳ್ವ ಕುಮಟಾದಲ್ಲಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಅಲ್ಲಿ ನಿವೇದಿತ್‌ಗೆ ಅವಕಾಶ ಸಿಕ್ಕರೆ, ಮಂಗಳೂರು ದಕ್ಷಿಣದಲ್ಲಿ ಕ್ರೈಸ್ತ ಸಮುದಾಯದವರಿಗೆ ಟಿಕೆಟ್ ಸಿಗುವುದು ಕಷ್ಟ. ಆಗ ಜೆ.ಆರ್.ಲೋಬೋ, ಐವನ್ ಡಿ’ಸೋಜಾ ಅವರಿಗೆ ಅವಕಾಶ ತಪ್ಪಿ, ಮಾಜಿ ಸಚಿವ ಜನಾರ್ಧನ ಪೂಜಾರಿಯವರ ಪಟ್ಟದ ಶಿಷ್ಯ, ಮತ್ತು ಹತ್ತಾರು ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ಬಿಲ್ಲವ ಸಮುದಾಯದ ಪ್ರಭಲ ಮುಂದಾಳು ಆರ್. ಪದ್ಮರಾಜ್‌ಗೆ ಅದೃಷ್ಟ ಖುಲಾಯಿಸಬಹುದು. ಆಗ ಪುತ್ತೂರಿನಲ್ಲಿ ಬಂಟ ಸಮುದಾಯದ ಶಕುಂತಲಾ ಶೆಟ್ಟಿ ಅಥವಾ ಅಶೋಕ್‌ಕುಮಾರ್ ರೈ ಅವರಿಗೆ ಅವಕಾಶವೂ ಆಗ ಬಹುದು. ಒಂದು ವೇಳೆ ಮಂಗಳೂರು ದಕ್ಷಿಣದಲ್ಲಿ ಕ್ರೈಸ್ತರಿಗೇ ಟಿಕೆಟ್ ಸಿಕ್ಕಿದಲ್ಲಿ ಪುತ್ತೂರಿನಲ್ಲಿ ಬಿಲ್ಲವ ಸಮು ದಾಯದವರಿಗೆ ಅವಕಾಶ ಸಿಗಬಹುದು. ಹೀಗೆ ಹಲವು ಸಂಯೋ ಜನೆಗಳನ್ನು ಹಿರಿಯ ನಾಯಕರು ಯೋಚಿಸುತ್ತಿದ್ದಾರೆ. ಒಟ್ಟಿನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆ.ಆರ್.ಲೋಬೋ, ಐವನ್ ಡಿ’ಸೋಜಾರಿಗೆ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ.
ವರಿಷ್ಠರ ಮೇಲೆ ಒತ್ತಡ ತಂತ್ರ
ಉಡುಪಿ: ಬುಧವಾರದ ನಿರೀಕ್ಷೆಯೂ ಹುಸಿಯಾ ಗಿದ್ದು, ಎಐಸಿಸಿಯಿಂದ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 2ನೇ ಪಟ್ಟಿ ಹೊರ ಬಿದ್ದಿಲ್ಲ. ಹೀಗಾಗಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಕಾಯುವಿಕೆ ಮುಂದುವರಿಸಿದೆ. ಬಿಜೆಪಿ ಕೂಡ ಇದಕ್ಕೆ ಹೊರತಾಗಿಲ್ಲ. ಐದೂ ಕ್ಷೇತ್ರದಲ್ಲೂ ಬಿಜೆಪಿ ವಲಯದ ಕಾತರ ಹೆಚ್ಚಿದೆ.
ಬೈಂದೂರಿಗೆ ಗೋಪಾಲ ಪೂಜಾರಿ, ಕಾಪುವಿಗೆ ವಿನಯ ಕುಮಾರ್ ಸೊರಕೆ ಹಾಗೂ ಕುಂದಾಪುರಕ್ಕೆ ದಿನೇಶ್ ಹೆಗ್ಡೆ ಮೊಳಹಳ್ಳಿ ಯವರನ್ನು ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಘೋಷಿ ಸಿದೆ. ಉಡುಪಿ ಕ್ಷೇತ್ರದ ಟಿಕೆಟ್‌ಗಾಗಿ 8 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ಗಂಭೀರ ಪ್ರಯತ್ನ ನಡೆಸುವ ಜತೆಗೆ ರಾಜ್ಯದ ವರಿಷ್ಠರೊಂದಿಗೆ ಎಐಸಿಸಿ, ಕೆಪಿಸಿಸಿ ಕಚೇರಿ ಸುತ್ತುತ್ತಿದ್ದಾರೆ. ಇನ್ನು ಕೆಲವರು ಸ್ಥಳೀಯ ನಾಯಕರ ಮೂಲಕ ರಾಜ್ಯ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಮುಂದುವರಿಸಿದ್ದಾರೆ.
ಕಾರ್ಕಳದಲ್ಲಿ ಕಾಂಗ್ರೆಸ್‌ಗೆ ಯಾರು ಎಂಬ ಪ್ರಶ್ನೆಗೆ ಶೀಘ್ರ ಉತ್ತರ ಸಿಕ್ಕೀತು. ಕ್ಷೇತ್ರದಲ್ಲಿ ಕೆಲವರು ಪಕ್ಷದ ಚಿಹ್ನೆಯಡಿ ಪ್ರಚಾರ ನಡೆಸುತ್ತಿದ್ದರೂ ಟಿಕೆಟ್ ಖಾತ್ರಿ ಯಾರಿಗೂ ಆಗಿಲ್ಲ. ಅರ್ಜಿ ಸಲ್ಲಿಸಿದ ನಾಲ್ವರು ಹಾಗೂ ಅರ್ಜಿ ಸಲ್ಲಿಸದೇ ಇರುವ ಆಕಾಂಕ್ಷಿಯೂ ಈ ಸಾಲಿನಲ್ಲಿದ್ದಾರೆ.
ಈ ಎರಡೂ ಕ್ಷೇತ್ರದಲ್ಲೂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದ ರಾಮಯ್ಯ ಬಣ ಇರುವುದು ಮೇಲ್ನೋಟಕ್ಕೆ ಕಾಣಸಿಗದಿದ್ದರೂ, ಟಿಕೆಟ್‌ನ ಕಸರತ್ತಿನಲ್ಲಿ ಸ್ಪಷ್ಟವಾಗುತ್ತಿದೆ. ಎರಡು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಮುಖಂಡರಲ್ಲೂ ಕಾತರ ಮನೆ ಮಾಡಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆಯ ಬೆನ್ನಿಗೇ ಬಿಜೆಪಿ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕ್ಷೇತ್ರಗಳ ಕಣ ಚಿತ್ರಣದಲ್ಲೂ ಬದಲಾವಣೆ ಸಂಭವವಿದೆ.