Monday, November 25, 2024
ದಕ್ಷಿಣ ಕನ್ನಡರಾಜ್ಯಸುದ್ದಿ

ನಾಲ್ಕು ತಿಂಗಳೊಳಗೆ ಪ್ರವೀಣ್‌ ನೆಟ್ಟಾರು ಮನೆ ನಿರ್ಮಾಣ : ಚುನಾವಣಾ ಹೊಸ್ತಿಲಲ್ಲೇ ಗೃಹಪ್ರವೇಶ – ಕಹಳೆ ನ್ಯೂಸ್

ಮಂಗಳೂರು, ಏಪ್ರಿಲ್‌ 6: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ನಡೆದು ಎಂಟು ತಿಂಗಳ ಒಳಗಾಗಿ ಬಿಜೆಪಿ ವತಿಯಿಂದ ನೆಟ್ಟಾರು ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಡಲಾಗಿದೆ. ಈ ಮೂಲಕ ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರ ಪ್ರಯೋಗಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣೆಸಮಯದಲ್ಲೇ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದ್ದು, ಎಪ್ರಿಲ್ 27ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುನಲ್ಲಿ ಗೃಹ ಪ್ರವೇಶ ನಡೆಯಲಿದೆ. ಚುನಾವಣೆ ಹೊತ್ತಲ್ಲಿ ಪ್ರವೀಣ್ ನೆಟ್ಟಾರು ಮನೆಯ ಗೃಹ ಪ್ರವೇಶ ನಡೆಯುತ್ತಿದ್ದು, ಅಸಮಾಧಾನಿತ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ರಾಜ್ಯಬಿಜೆಪಿಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ಬಹುತೇಕ 90% ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2022 ನವೆಂಬರ್‌ 2ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರಿಂದ ಪ್ರವೀಣ್‌ ನೆಟ್ಟಾರು ಮನೆಯ ಗುದ್ದಲಿ ಪೂಜೆ ನಡೆದಿತ್ತು. ಈ ವೇಳೆ ವರ್ಷದ ಒಳಗಾಗಿ ಮನೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.

ಸದ್ಯ ವೇಗವಾಗಿ ಮನೆ ನಿರ್ಮಾಣ ಪೂರ್ತಿಗೊಳ್ಳುತ್ತಿದ್ದು, ಕೇವಲ ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿದು ಏ‌.27ರಂದು ಗೃಹ ಪ್ರವೇಶವಾಗುತ್ತಿದೆ. ಈ ಮೂಲಕ ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದೂ ಮುಖಂಡ ಹಾಗೂ ಬಿಜೆಪಿ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂಬ ಸಂದೇಶವನ್ನು ಬಿಜೆಪಿ ಸಾರಲು ಮುಂದಾಗಿದ್ದು, ಹತ್ಯೆ ವೇಳೆ ನಡೆದ ಘಟನೆ ಹಾಗೂ ಪಕ್ಷಕ್ಕೆ ಆದ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ

ಪ್ರವೀಣ್ ‌ನೆಟ್ಟಾರು ಕನಸಿನ 60 ಲಕ್ಷ ರೂಪಾಯಿ ವೆಚ್ಚದ ಮನೆ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, 2,700 ಚದರ ಅಡಿಯ ಮನೆಯನ್ನು ಮುಗ್ರೋಡಿ ಕನ್ಸ್ಟ್ರಕ್ಷನ್ ಪೂರ್ಣಗೊಳಿಸಿದೆ. ಕೊಟ್ಟ ಮಾತಿನಂತೆ ನಳಿನ್ ಕುಮಾರ್ ನೇತೃತ್ವದಲ್ಲಿ ಮನೆ ನಿರ್ಮಾಣ ಪೂರ್ಣವಾಗಿದ್ದು, ಪ್ರವೀಣ್ ಪತ್ನಿಗೆ ಸದ್ಯ ‌ದ.ಕ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸರ್ಕಾರಿ ಉದ್ಯೋಗವನ್ನೂ ನೀಡಲಾಗಿದೆ.

ಅಲ್ಲದೇ ಪ್ರವೀಣ್ ಕುಟುಂಬಕ್ಕೆ ಸರ್ಕಾರದ ಕಡೆಯಿಂದ 25ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ನೆಟ್ಟಾರು ಹತ್ಯೆಗೆ ನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಪ್ರಮುಖರು ನೆಟ್ಟಾರು ಮನೆಗೆ ಭೇಟಿ ನೀಡಿದ್ದರು.

ಇನ್ನು ಪ್ರವೀಣ್ ‌ನೆಟ್ಟಾರು ಕನಸಿನ ಮನೆಗೆ ಎಪ್ರಿಲ್27 ರಂದು ಗೃಹ ಪ್ರವೇಶವಾಗಲಿದ್ದು, ಮನೆಗೆ ಪ್ರವೀಣ್ ಎಂದು ಹೆಸರಿಡಲಾಗಿದೆ. ಗೃಹ ಪ್ರವೇಶದ ಸಂಧರ್ಭದಲ್ಲಿ ಗಣಪತಿ‌ಹೋಮ, ಭಜನಾ ಸಂಕೀರ್ತನೆ, ಸತ್ಯನಾರಾಯಣ ಪೂಜೆ, ಮತ್ತು ರಾತ್ರಿ ಕಲ್ಲುರ್ಟಿ ದೈವದ ನೇಮೋತ್ಸವೂ ನಡೆಯಲಿದೆ.

ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಘಟನೆ ಬಳಿಕ ಬಿಜೆಪಿ ಸರ್ಕಾರದಲ್ಲಿಯೇ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ವಿಚಾರಣೆಯನ್ನು ಎನ್‌ಐಎ ಅಧಿಕಾರಿಗಳಿಗೆ ನೀಡಲಾಗಿದ್ದು, 15ಕ್ಕೂ ಹೆಚ್ಚು ಆರೋಪಿಗಳನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು.