ಬೆಂಗಳೂರು: ಪ್ರತಿನಿತ್ಯ ದೇಶ ವಿದೇಶದ ವಿಶೇಷತೆಗಳನ್ನು ಕ್ರಿಯಾತ್ಮಕವಾಗಿ ಫೀಚರ್ ಮಾಡುವ ಗೂಗಲ್ ಡೂಡಲ್, ಇಂದು ಭಾರತದ ಶ್ರೇಷ್ಠ ಇಂಜಿಯರ್ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವನ್ನು ಸ್ಮರಿಸಿದೆ.
ದೇಶ ಕಂಡ ಅತ್ಯುತ್ತಮ ಇಂಜಿನಿಯರ್ ಸರ್.ವಿ.ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನವಾದ ಇಂದು (ಸೆ.15) ಗೂಗಲ್ ತನ್ನ ಮುಖಪುಟದಲ್ಲಿ ಅವರ ಭಾವಚಿತ್ರವನ್ನು ಡೂಡಲ್ಗೆ ಅಳವಡಿಸಿ ನಮನ ಸಲ್ಲಿಸಿದೆ. ಸರ್.ಎಂ.ವಿಗೆ ಗೌರವ ಸಲ್ಲಿಸಲು ಅವರ ಹುಟ್ಟಿದ ದಿನವನ್ನು ದೇಶದಲ್ಲಿ ಇಂಜಿನಿಯರ್ ದಿನ ಎಂದು ಆಚರಿಸಲಾಗುತ್ತಿದೆ.
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆ.15 1861ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದರು. 1912-1918 ಅವಧಿಯಲ್ಲಿ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಅವರಿಗೆ “ಸರ್” ಎಂಬ ಪದವಿ ನೀಡಿ ಗೌರವಿಸಿತ್ತು. 1955ರಲ್ಲಿ ಭಾರತ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು.
ಈ ಹಿಂದೆ ನಟ ಸಾರ್ವಭೌಮ ಡಾ. ರಾಜ್‍ಕುಮಾರ್ ಅವರನ್ನು ಗೂಗಲ್ ತನ್ನ ಡೂಡಲ್‍ನಲ್ಲಿ ಪರಿಚಯಿಸಿತ್ತು. ಕುವೆಂಪು ಅವರೂ ಕೂಡ ಡೂಡಲ್‍ನಲ್ಲಿ ಕಾಣಿಸಿಕೊಂಡಿದ್ದರು.