Friday, September 20, 2024
ಸುದ್ದಿ

ರಾಷ್ಟ್ರಸಂತನ ಯಶೋಮಾರ್ಗ ; ಜನ್ಮದಿನದ ವಿಶೇಷ ” ಮೋದಿ @ 69 ” – ಕಹಳೆ ನ್ಯೂಸ್

ನರೇಂದ್ರ ಮೋದಿ ಎಂದರೆ ಭಾರತ ಎನ್ನುವ ಮಟ್ಟಿಗೆ ವಿಶ್ವಭೂಪಟದಲ್ಲಿ ಹಿಂದುಸ್ಥಾನಕ್ಕೆ ವಿಶೇಷ ಗುರುತು ನೀಡಿದ ಸಾಧನೆಗೈದಿರುವ ಭಾರತದ ಪ್ರಧಾನಿ ಸೋಮವಾರ (ಸೆ.17) 69ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗುಜರಾತಿನ ವಡ್​ನಗರ್​ನಿಂದ ದೆಹಲಿಯ ಒಡ್ಡೋಲಗದವರೆಗೆ ಅವರು ಸಾಗಿ ಬಂದಿರುವ ಹಾದಿ ಹಲವರಿಗೆ ಅನುಕರಣೀಯವಾದರೆ ಇನ್ನೂ ಕೆಲವರಿಗೆ ಅಚ್ಚರಿಯ ಪಥ.

ಸಂಘದಿಂದ ಬೆಸೆದುಕೊಂಡ ರಾಜಕೀಯ ಹಾದಿಯಲ್ಲಿ ಬಿಜೆಪಿಯ ಸಂಘಟನೆ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಪಕ್ಷವನ್ನು ಸಂಸತ್​ನ ಗದ್ದುಗೆಗೇರಿಸುವಲ್ಲಿ ಯಶಸ್ವಿಯಾಗಿರುವ ಮೋದಿ ಮತ್ತೊಂದು ಅವಧಿಗೂ ಮೋಡಿ ಮಾಡಲು ಅಣಿಯಾಗಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ಅವರ ಜೀವನಪಥದ ಇಣುಕುನೋಟ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹುಟ್ಟು-ಹಿನ್ನೆಲೆ: ದಾಮೋದರದಾಸ್ ಮೂಲಚಂದ್ ಮೋದಿ-ಹೀರಾಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದ (1950ರ ಸೆಪ್ಟೆಂಬರ್ 17, ಗುಜರಾತಿನ ವಡ್​ನಗರ್) ನರೇಂದ್ರ ಮೋದಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅವರಿಗೆ ಮೂವರು ಸೋದರರು, ಇಬ್ಬರು ಸೋದರಿಯರಿದ್ದಾರೆ. 1967ರಲ್ಲಿ ಜಶೋದಾಬೆನ್ ಅವರೊಂದಿಗೆ ಮೋದಿ ವಿವಾಹವಾಯಿತು.

ಕಬಡ್ಡಿ ಪಟು: ವಡ್​ನಗರದ ಕುಮಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ಮೋದಿ ಒಮ್ಮೆ ಕಬಡ್ಡಿ ಪಂದ್ಯವೊಂದರಲ್ಲಿ ಚಾಂಪಿಯನ್ ತಂಡವನ್ನು ಎದುರಿಸಬೇಕಿತ್ತು. ಎಲ್ಲರೂ ಗೆಲುವಿನ ಆಸೆ ಕೈಬಿಟ್ಟಿದ್ದರು. ಆದರೆ ಪಂದ್ಯ ಮುಂದುವರಿಯುತ್ತಿದ್ದಂತೆ ಅನಿರೀಕ್ಷಿತ ತಿರುವು ದಕ್ಕಿ ಗೆಲುವೂ ಸಿಕ್ಕಿತು. ಬಾಲಕ ಮೋದಿ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದ. ಪ್ರತಿದಿನ ಸಂಜೆ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದ ಮೋದಿ ಗೆಳೆಯರೊಂದಿಗೆ ಕಬಡ್ಡಿ ಆಡುವುದು ಮಾಮೂಲಾಗಿತ್ತು. ಶಾಲೆಯಲ್ಲಿ ಎನ್​ಸಿಸಿಗೆ ಸೇರಿಕೊಂಡ ಕಾರಣ, ನಟನೆ, ಭಾಷಣದ ಕಲೆಯೂ ಸಿದ್ಧಿಸಿತು. ಜೀವನಕ್ಕೊಂದು ಶಿಸ್ತೂ ಬಂದಿತು.

ಹಿಮಾಲಯದ ಮಡಿಲಲ್ಲಿ: ಸಂನ್ಯಾಸ ಸ್ವೀಕಾರಕ್ಕೆಂದು ಬಾಲ್ಯದಲ್ಲೇ (ಶಾಲಾಶಿಕ್ಷಣದ ಬಳಿಕ) ಕೈಯಲ್ಲಿ ಹಣವನ್ನೂ ಇಟ್ಟುಕೊಳ್ಳದೆ ಕೇವಲ 2 ಜೊತೆ ಬಟ್ಟೆಯೊಂದಿಗೆ ಮನೆ ಬಿಟ್ಟಿದ್ದ ಮೋದಿ, ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಆಶ್ರಮ ಅಲ್ಲಿಂದ ಹಿಮಾಲಯಕ್ಕೂ ತೆರಳಿ ಸಾಧುಸಂತರ ಜತೆ ನೆಲೆಸಿದ್ದರು. ಆದರೆ ಸಮಾಜದಲ್ಲಿದ್ದುಕೊಂಡೇ ಸೇವೆ-ಸಮರ್ಪಣೆ ಮೂಲಕ ಏನಾದರೂ ಸಾಧಿಸಬೇಕು ಎಂದು ನಿಶ್ಚಯಿಸಿ 2 ವರ್ಷಗಳ ಬಳಿಕ ಮನೆಗೆ ಮರಳಿದ್ದರು. ಈಗಲೂ ಬೇಲೂರು ರಾಮಕೃಷ್ಣ ಆಶ್ರಮದೊಂದಿಗೆ ಅವರಿಗೆ ಒಡನಾಟವಿದೆ.

ನಮೋ ಶಕ್ತಿ

# ಭ್ರಷ್ಟಾಚಾರದ ಕಳಂಕವಿಲ್ಲ

# ಉತ್ತಮ ವಾಗ್ಮಿ, ಸಂಘಟನಾ ಚತುರ

# ಗುಜರಾತ್ ಅಭಿವೃದ್ಧಿಯ ಹೆಗ್ಗಳಿಕೆ

# ಭಿನ್ನಮತ ಎದುರಾದಾಗ ನಿಭಾಯಿಸುವ ಕೌಶಲ

# ಸಮಯೋಚಿತ ರಾಜಕೀಯ, ರಾಜತಾಂತ್ರಿಕ ನಡೆ

# ಯುವಕರ ಪಾಲಿನ ಐಕಾನ್

# ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸುವ ಜಾಣ್ಮೆ

# ಎಲ್ಲರನ್ನೂ ಜತೆಗೊಯ್ಯುವ ಸಾಮರ್ಥ್ಯ

# ಅಭಿವೃದ್ಧಿ ರಾಜಕಾರಣಕ್ಕೆ ಆದ್ಯತೆ ನೀಡುವಿಕೆ

# ಗಟ್ಟಿ ನಾಯಕತ್ವಕ್ಕೆ ಪರ್ಯಾಯಪದ.

ಫ್ಯಾಷನ್ ಐಕಾನ್

ಈ ವಯಸ್ಸಲ್ಲೂ ಮೋದಿ ಯುವಕರಂತೆ ಆಕರ್ಷಕವಾಗಿ ಕಾಣಲು ಕಾರಣ ಅವರು ಉಡುಪು, ಸ್ಟೈಲ್​ಗೆ ನೀಡುವ ಆದ್ಯತೆ. ಎದುರಿರುವರನ್ನು ಮಾತುಗಾರಿಕೆಯಿಂದ ಗೆಲ್ಲುವಂತೆಯೇ ವಿಭಿನ್ನ ಶೈಲಿಯ ದಿರಿಸುಗಳಿಂದಲೂ ಸೆಳೆಯುವುದು ಅವರ ವೈಶಿಷ್ಟ್ಯ. ಯುವಕರಲ್ಲಿ ಕುರ್ತಾ ಕ್ರೇಜ್ ಹೆಚ್ಚಿದ್ದೇ ಮೋದಿಯಿಂದ ಎಂಬುದು ‘ಬಹುಮತಾಭಿಪ್ರಾಯ’! ಸಮಾರಂಭ-ಸನ್ನಿವೇಶಕ್ಕೆ ತಕ್ಕಂತೆ ಅವರ ವೇಷಭೂಷಣ ಬದಲಾಗುತ್ತದೆ. ವಿದೇಶಿ ಅತಿಥಿಗಳ ಭೇಟಿಯ ವೇಳೆ ಸೂಟು-ಬೂಟು, ಅದ್ದೂರಿ ಸಮಾರಂಭಗಳಲ್ಲಿ ಭಾಗಿಯಾಗುವಾಗ ರೇಷ್ಮೆ ಕುರ್ತಾ, ಮಿಕ್ಕ ವೇಳೆ ಖಾದಿ ಕುರ್ತಾ ಅವರ ಆಯ್ಕೆಗಳು. ಸ್ವಲ್ಪ ಹೆಚ್ಚುಹಣ ಖರ್ಚುಮಾಡುವುದು ಕುರ್ತಾ, ಗಡಿಯಾರ, ಪೆನ್ನು, ಕನ್ನಡಕ ಮತ್ತು ಚಪ್ಪಲಿಗಳಿಗೆ.

ಮೋದಿ ದಿನಚರಿ

# ಸಮಯದ ಮೌಲ್ಯ, ಅದರ ಸದ್ಬಳಕೆಯ ಅರಿವಿರುವ ಮೋದಿ ದಿನಚರಿಯೂ ಶಿಸ್ತುಬದ್ಧ, ಯೋಜನಾಬದ್ಧ

# ಪ್ರತಿದಿನ ಮುಂಜಾನೆ 3.30-3.45ರ ವೇಳೆಗೆ ಎದ್ದು ಪ್ರಾತರ್ವಿಧಿಗಳನ್ನು ಪೂರೈಸಿ 1 ಗಂಟೆ ಪ್ರಾಣಾಯಾಮ-ಯೋಗಾಭ್ಯಾಸ ಮಾಡುತ್ತಾರೆ. ಅವರ ನಳನಳಿಸುವ ಆರೋಗ್ಯದ ಗುಟ್ಟು ಇದೇ

# ಉಪಾಹಾರದ ಬಳಿಕ ಪತ್ರಿಕೆಗಳ ಓದು, ಇ-ಮೇಲ್​ಗಳಿಗೆ ಉತ್ತರಿಸುವಿಕೆ

# ಬಳಿಕ ತಡರಾತ್ರಿಯವರೆಗೆ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಗಳ ನಿರ್ವಹಣೆ. ವಿಶ್ರಾಂತಿಗೆಂದು ರಜೆ ತೆಗೆದುಕೊಂಡ ನಿದರ್ಶನವಿಲ್ಲ.

ಫೇವರಿಟ್ ತಿನಿಸುಗಳು

ಮೋದಿ ಪಾಕಪ್ರಿಯರೂ ಹೌದು, ಗುಜರಾತಿ ತಿನಿಸುಗಳೆಂದರೆ ಅಚ್ಚುಮೆಚ್ಚು. ಮನೆಯಲ್ಲಿದ್ದರೂ ಪ್ರವಾಸದಲ್ಲಿದ್ದರೂ ಊಟದಲ್ಲಿ ಗುಜರಾತಿ ಖಾದ್ಯಗಳು ಇರಲೇಬೇಕು. ಅಪ್ಪಟ ಸಸ್ಯಾಹಾರಿ ಮೋದಿ ಇಷ್ಟದ ಖಾದ್ಯಗಳು ಇಂತಿವೆ:

# ಖಿಚ್ಡಿ: ಗುಜರಾತಿನ ಜನಪ್ರಿಯ ಖಾದ್ಯವಿದು

# ಢೋಕ್ಲಾ: ಈ ಸಾಂಪ್ರದಾಯಿಕ ಖಾದ್ಯ ಸ್ಪಂಜಿನಂತೆಯೂ ರಸಭರಿತವಾಗಿಯೂ ಇದ್ದು ಲಘು ಉಪಾಹಾರ ಎನಿಸಿಕೊಂಡಿದೆ.

# ಖಾಂಡ್ವಿ: ಚಹಾದ ಜತೆ ಸೇವಿಸಲ್ಪಡುವಂಥದು

# ಬಾದಾಮಿ ಮತ್ತು ಪಿಸ್ತಾ ಶ್ರೀಖಂಡ: ‘ಸ್ವೀಟ್ ಇಂಡಿಯನ್ ಕಸ್ಟರ್ಡ್’ ಎಂದೇ ಇದು ಹೆಸರುವಾಸಿ

ಲೇಖನಿ ಹಿಡಿದಾಗ…

‘ರಾಜಕಾರಣದ ದೆಸೆಯಿಂದಾಗಿ, ಮಿಕ್ಕ ವೈಯಕ್ತಿಕ ಮತ್ತು ಸಾಮಾಜಿಕ ಅಭಿರುಚಿಗಳ ಕಡೆಗೆ ಗಮನವನ್ನೇ ಹರಿಸಲಾಗ್ತಿಲ್ಲ’ ಎಂದು ಅಲವತ್ತುಕೊಳ್ಳುವ ಜನನಾಯಕರಿಗೇನೂ ನಮ್ಮಲ್ಲಿ ಕಮ್ಮಿಯಿಲ್ಲ. ಇಂಥವರ ನಡುವೆ ವಿಭಿನ್ನತೆ ಕಾಯ್ದುಕೊಂಡಿರುವುದು ಮೋದಿ ವೈಶಿಷ್ಟ್ಯ. ಮಾತುಗಾರ ಮೋದಿಯೊಳಗೊಬ್ಬ ಕವಿ ಮತ್ತು ಲೇಖಕನೂ ಇದ್ದಾನೆ. ಸಂಘದ ಪ್ರಚಾರಕರಾಗಿದ್ದ ಅವಧಿಯಲ್ಲಿ ಹರಿತ ಲೇಖನಗಳ ಜತೆಗೆ ಕವಿತೆಯನ್ನೂ ಬರೆಯುತ್ತಿದ್ದರು. ಹಿಂದುತ್ವ, ನಾಯಕರ ಕುರಿತಂತೆ ಗುಜರಾತಿ ಭಾಷೆಯಲ್ಲಿ ಕೆಲ ಪುಸ್ತಕಗಳನ್ನೂ ಬರೆದಿದ್ದು ಬ್ಲಾಗ್​ನಲ್ಲೂ ಆಗಾಗ ಬರಹಗಳನ್ನು ಪ್ರಕಟಿಸುತ್ತಾರೆ. ಗುಜರಾತಿ, ಹಿಂದಿ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಅನುದಿನ ಅನುಕ್ಷಣ ಸವಾಲನ್ನೇ ಹಾಸಿ ಹೊದ್ದಿಕೊಳ್ಳಬೇಕಾದ ಅನಿವಾರ್ಯತೆಯಿರುವ ರಾಜಕೀಯ ರಂಗದಲ್ಲಿ, ಇರುವ ಸಮಯದಲ್ಲೇ ಒಂದಷ್ಟು ಹೊಂದಿಸಿಕೊಂಡು ಸಾಹಿತ್ಯ ರಚನೆಗೆ ಮುಂದಾಗಿದ್ದು ಮೋದಿ ವಿಶೇಷತೆ. ಅವರು ಬರೆದ ಈ ಪುಸ್ತಕಗಳೇ ಈ ಮಾತಿಗೆ ಸಾಕ್ಷಿ-

 

# Social Harmony
#Jyotipunj #India’s Singapore Story
#Mann Ki Baat – A Social Revolution on Radio
#A Journey: Poems by Narendra Modi
# Exam Warriors
# Convenient Action: Gujarat’s Response To Challenges Of Climate Change
# Abode of Love
# Samajik Samrasta
# Premtirth
# Shree Guruji Ek Swayamsevak
# Convenient Action-Continuity For Change
# Vakil Saheb Lakshmanrao Inamdar
# Samajik Samrasta
# Sakshi Bhaav
# Aankh Ye Dhanya Hai
# Setubandh
# Aankh Aa Dhanya Che
# Sangarshma Gujarat
# Dr. Hedgewar Ji Ki Jivanjali
# Janiye Mere Bare Me
# Shri Madhukarrao Bhagwat

ಅರ್ಧತೋಳಿನ ಕುರ್ತಾ ರಹಸ್ಯ

ಮೋದಿ ಅರ್ಧತೋಳಿನ ಕುರ್ತಾ ಧರಿಸಲು ಆರಂಭಿಸಿದ್ದರ ಹಿಂದೆ ಒಂದು ಸ್ವಾರಸ್ಯವಿದೆ. ಅದನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಹೀಗೆ- ‘ಸಂಘದ ಪ್ರಚಾರಕನಾಗಿದ್ದಾಗ ಸಂಚಾರದಲ್ಲೇ ಇರುತ್ತಿದ್ದೆ. ಆಗ ನನ್ನಲ್ಲಿದ್ದುದು ಪುಟ್ಟ ಬ್ಯಾಗ್; ಅದರಲ್ಲಿ ಕೆಲವೇ ಉಡುಪು. ಉಡುಪನ್ನು ನಾನೇ ಸ್ವಚ್ಛಗೊಳಿಸಿಕೊಳ್ಳಬೇಕಿತ್ತು. ಉದ್ದ ತೋಳಿನ ಕುರ್ತಾ ಬಹುಬೇಗ ಕೊಳೆಯಾಗುತ್ತಿತ್ತು, ಅದನ್ನು ತೊಳೆಯಲು ಹೆಚ್ಚು ಸಮಯ, ಶ್ರಮ ಆಗುತ್ತಿತ್ತು. ಹೀಗಾಗಿ ಕುರ್ತಾ ತೋಳನ್ನು ಅರ್ಧ ಕತ್ತರಿಸಿ ಹಾಕಿಕೊಂಡೆ. ಅದು ಚೆನ್ನಾಗೇ ಹೊಂದಿಕೊಂಡಿತು. ಅಂದಿನಿಂದ ಅರ್ಧತೋಳಿನ ಕುರ್ತಾ ನನ್ನ ಅಚ್ಚುಮೆಚ್ಚಿನ ದಿರಿಸು…’.

 

 

ಅನುಕರಣೀಯ ವ್ಯಕ್ತಿತ್ವ

ಪರರ ಕಷ್ಟಗಳಿಗೆ ಸ್ಪಂದಿಸಿ ನೆರವಿಗೆ ಧಾವಿಸುವ ಗುಣ ಬಾಲ್ಯದಿಂದಲೂ ಅವರ ಮೈಗೂಡಿದೆ. 1965ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ 15 ವರ್ಷದವರಾಗಿದ್ದ ಮೋದಿ, ಸ್ವಯಂಪ್ರೇರಣೆಯಿಂದ ಸೈನಿಕರ ಸರಕು ಸಾಗಣೆಗೆ ನೆರವಾಗಿದ್ದರು. 1967ರಲ್ಲಿ ನೆರೆಪೀಡಿತ ಗುಜರಾತ್ ಸಂತ್ರಸ್ತರ ಸೇವೆ ಮಾಡಿದ್ದರು. ಸ್ವಾಮಿ ವಿವೇಕಾನಂದರ ಬಹುದೊಡ್ಡ ಅಭಿಮಾನಿಯಾಗಿರುವ ಮೋದಿ, ‘ವಿವೇಕಾನಂದ ಯುವ ವಿಕಾಸಯಾತ್ರೆ’ ಕೈಗೊಂಡಿದ್ದರ ಜತೆಗೆ, ವಿವೇಕಾನಂದರ ಕುರಿತಾದ ಸಾಹಿತ್ಯವನ್ನೂ ಆಳವಾಗಿ ಅಭ್ಯಸಿಸಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ರಾಜಕೀಯ ಜೀವನದ ಮೇಲ್ಪಂಕ್ತಿಯಾಗಿ ಸ್ವೀಕರಿಸಿದ್ದಾರೆ.

ಅಮ್ಮಾ ಎಂದರೆ ಏನೋ ಹರುಷವು…

ಅಮ್ಮ ಹೀರಾಬೆನ್ ಬಗ್ಗೆ ಇನ್ನಿಲ್ಲದ ಪ್ರೀತಿ-ಗೌರವವಿರುವ ಮೋದಿ, ಯಾವುದೇ ಕೆಲಸ ಆರಂಭಿಸುವ ಮುನ್ನ ಹಾಗೂ ಅದರಲ್ಲಿ ಯಶಸ್ಸು ದೊರಕಿದ ಬಳಿಕ ಅಮ್ಮನ ಆಶೀರ್ವಾದ ಪಡೆಯುವುದನ್ನು ಮರೆಯುವುದಿಲ್ಲ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ, ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಂದಾಗ ಮಾತ್ರವಲ್ಲದೆ, ಪ್ರಧಾನಿಯಾಗಲು ಗುಜರಾತ್​ನಿಂದ ಹೊರಡುವ ಹೊತ್ತಲ್ಲೂ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

 

ನಮೋ ಬ್ರ್ಯಾಂಡ್​​​

ಸ್ಟೈಲ್, ಲುಕ್, ಸಂವಹನ ಮತ್ತು ನಾಯಕತ್ವಗಳ ಬಾಬತ್ತಿನಲ್ಲಿ ಮೋದಿ ಅಗ್ರಗಣ್ಯ. ಅವರ ನಡೆ-ನುಡಿ ಅನುಸರಿಸುವವರು, ಉಡುಪಿನ ಮಾದರಿ ಇಷ್ಟಪಡುವವರು…. ಹೀಗೆ ಆರಾಧಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ‘ನಮೋ ಬ್ರಾ್ಯಂಡ್’ ಬೆಳವಣಿಗೆಗೂ ಕಾರಣವಾಗಿ ಕುರ್ತಾ, ವಾಚ್, ಜಾಕೆಟ್​ನಿಂದ ನಿತ್ಯೋಪಯೋಗಿ ವಸ್ತುಗಳವರೆಗೂ ಈ ಬ್ರಾ್ಯಂಡ್ ವ್ಯಾಪಿಸಿದೆ.

ಮೋದಿ ಅತ್ಯಂತ ದೂರದೃಷ್ಟಿ ಹೊಂದಿರುವ ಜಾಗತಿಕ ನಾಯಕರಲ್ಲಿ ಒಬ್ಬರು. ಅವರ ಮಿತ್ರತ್ವದಿಂದ ಭಾರತ ಹಾಗೂ ಜಪಾನ್​ಗೆ ಸಾಕಷ್ಟು ಲಾಭವಾಗಲಿದೆ. ಈ ಕಾರಣಕ್ಕಾಗಿ ಭಾರತದಲ್ಲಿ ಬುಲೆಟ್ ರೈಲು ಯೋಜನೆಗೆ ಸಹಕಾರ ನೀಡಲು ನಿರ್ಧರಿಸಲಾಗಿದೆ. ಜೈ ಜಪಾನ್, ಜೈ ಇಂಡಿಯಾ.

| ಶಿಂಜೋ ಅಬೆ ಜಪಾನ್ ಪ್ರಧಾನಿ

 

ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿ ಬಲಿಷ್ಠ ಹಾಗೂ ಕ್ರಿಯಾಶೀಲವಾಗಿದೆ. ವಿದೇಶಿ ಹೂಡಿಕೆಯ ನೀತಿ ಸರಳಗೊಂಡಿದೆ. ಭಾರತದ ಸಣ್ಣ ಉದ್ಯಮಗಳೂ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗಿದೆ.

| ಕ್ಸಿ ಜಿನ್​ಪಿಂಗ್ ಚೀನಾ ಅಧ್ಯಕ್ಷ

 

ಮೋದಿ ಒಬ್ಬ ಕ್ರಾಂತಿಕಾರಿ ನಾಯಕ. ನಮ್ಮಿಬ್ಬರ ಆಲೋಚನೆ ಬಹುತೇಕ ಒಂದೇ. ನಮ್ಮ ಬಳಿಯಿರುವ ಸೀಮಿತ ಸಂಪನ್ಮೂಲದಲ್ಲಿ ಜನರಿಗೆ ಹೆಚ್ಚಿನ ಕೊಡುಗೆ ನೀಡಲು ಯತ್ನಿಸುತ್ತಿದ್ದೇವೆ.

| ಬೆಂಜಮಿನ್ ನೆತನ್ಯಾಹು ಇಸ್ರೆಲ್ ಪ್ರಧಾನಿ

 

ನರೇಂದ್ರ ಮೋದಿ ರಷ್ಯಾದ ಅತಿ ದೊಡ್ಡ ಮಿತ್ರ. ರಕ್ಷಣೆ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಇಬ್ಬರ ಸಹಭಾಗಿತ್ವ ಮುಂದುವರಿಯಲಿದೆ.

| ವ್ಲಾದಿಮಿರ್ ಪುತಿನ್ ರಷ್ಯಾ ಅಧ್ಯಕ್ಷ