ಕುದ್ರೋಳಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಅದ್ದೂರಿ ಮೆರವಣಿಗೆ ಮೂಲಕ ರಾಜ್ಯಾಧ್ಯಕ್ಷ, ಸಂಸದರಾದ ನಳಿನ್ ಕುಮಾರ್ ಕಟೀಲು ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್
ಮಂಗಳೂರು, ಏ 18 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ಸೋಮವಾರ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಉಪಸ್ಥಿತಿಯಲ್ಲಿ ಚುನಾವಣ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಕಳೆದ ಐದು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ 4000 ಕೋಟಿ ರೂ ಮಿಕ್ಕಿ ಅನುದಾನ ತಂದು ನಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ. ಇನ್ನು ಸಾಕಷ್ಟು ಅಭಿವೃದ್ಧಿ ಮಾಡಲಿದ್ದು, 2025-26 ರ ಒಳಗೆ ಮಂಗಳೂರು ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ರೂಪ ಪಡೆದುಕೊಳ್ಳಲಿದೆ. ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿ ಬಾರಿ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುವ ಸಂಪ್ರದಾಯ ಪಾಲಿಸಿದ್ದೇನೆ. ಅದೇ ರೀತಿಯಲ್ಲಿ ಕದ್ರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ರಥಬೀದಿ ವೆಂಕಟರಮಣ ದೇವಸ್ಥಾನ, ಬಜಿಲಕೇರಿ ಮುಖ್ಯಪ್ರಾಣ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಇಂದಿನ ನಾಮಪತ್ರ ಸಲ್ಲಿಸುವಾಗ ಸೇರಿದ ಜನಸ್ತೋಮವನ್ನು ನೋಡುವಾಗ ಇದು ಗೆಲುವಿನ ನಂತರದ ವಿಜಯಯಾತ್ರೆಯಂತೆ ಕಂಗೊಳಿಸುತ್ತಿದೆ.
ರಾಜ್ಯಾಧ್ಯಕ್ಷರೂ, ನೆಚ್ಚಿನ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ವಿಜಯ ಯಾತ್ರೆಗೆ ಶುಭ ಕೋರಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸೇರಿರುವುದಕ್ಕೆ ಸರ್ವರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಹೇಳಿದರು. ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು.ಬಳಿಕ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಅಪಾರ ಸಂಖ್ಯೆ ಯಲ್ಲಿ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಪಾಲಿಕೆ ಕಚೇರಿಗೆ ಆಗಮಿಸಿದರು. ಇದಕ್ಕೂ ಮೊದಲು ಅವರು ನಗರದ ಕದ್ರಿ ಮಂಜುನಾಥ, ಮಂಗಳಾದೇವಿ, ರಥಬೀದಿಯ ವೆಂಕಟರಮಣ, ಬಜಿಲ ಕೇರಿಯ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ, ನಂತರ ಕದ್ರೋಳಿ ಗೋಕರ್ಣನಾಥ ದೇವಾಲಯ ದಲ್ಲಿ ಪೂಜೆ ನೆರವೇರಿಸಿದರು. ಮೆರವಣಿಗೆ ಹೊರಡುವ ಮೊದಲು ವಿವಿಧ ವಾರ್ಡ್ ಗಳ 100ಕ್ಕೂ ಹೆಚ್ಚು ದೇವಾಲಯಗಳಲ್ಲಿ ಪಕ್ಷದ ಪದಾಧಿಕಾರಿಗಳು ಪೂಜೆ ಸಲ್ಲಿಸಿ ತಂದಿದ್ದ ಪ್ರಸಾದವನ್ನು ಸ್ವೀಕರಿಸಿದರು.
ನಾಮಪತ್ರ ಸಲ್ಲಿಸುವಾಗ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸಂಚಾಲಕ ನಿತಿನ್ ಕುಮಾರ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ವಕೀಲ ರವೀಂದ್ರ ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಪ್ರಮುಖರಾದ ಉಮಾನಾಥ್ ಅಮೀನ್, ಸಿಎ ಗೌತಮ್ ಪೈ ಉಪಸ್ಥಿತರಿದ್ದರು. ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಚುನಾವಣಾ ಪ್ರಭಾರಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ ಬಂಗೇರ, ಪುರಂದರ ಜಪ್ಪಿನಮೊಗರು, ಮಂಡಲ ಉಪಾಧ್ಯಕ್ಷರಾದ ರಮೇಶ್ ಕಂಡೆಟ್ಟು, ದೀಪಕ್ ಪೈ, ಅಜಯ್ ಕುಲಶೇಖರ್, ರಮೇಶ್ ಹೆಗ್ಡೆ, ಪಾಲಿಕೆಯ ಸದಸ್ಯರು, ಸಮುದಾಯದ ಪ್ರಮುಖರು, ವಿವಿಧ ಕ್ಷೇತ್ರದ ಗಣ್ಯರು, ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.