Tuesday, January 21, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್‌ ಟಿಕೆಟ್‌ ಮಾರಾಟ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 2 ಕೋಟಿ ರೂ. ಪಡೆದು ಇನಾಯತ್‌ ಅಲಿಗೆ ಟಿಕೆಟ್‌ ಕೊಟ್ಟಿದ್ದಾರೆ ; ಮಾಜಿ ಶಾಸಕ ಮೊದೀನ್‌ ಬಾವಾ ಗಂಭೀರ ಆರೋಪ – ಕಹಳೆ ನ್ಯೂಸ್

ಬೆಂಗಳೂರು: ಟಿಕೆಟ್‌ ವಂಚಿತ ಕೆಲವರು ಪಕ್ಷದ ಟಿಕೆಟ್‌ ಮಾರಾಟವಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಇದು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಸಹೋದರ ಎಸ್‌.ಎಂ.ಶಂಕರ್‌ ಅವರ ಪುತ್ರ ಹಾಗೂ ಮದ್ದೂರು ಕಾಂಗ್ರೆಸ್‌ ಟಿಕೆಟ್‌ ವಂಚಿತ ಗುರುಚರಣ್‌ ಹಾಗೂ ಮಂಗಳೂರು ನಗರ ಉತ್ತರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮೊದೀನ್‌ ಬಾವಾ ಅವರು ಪಕ್ಷದ ವಿರುದ್ಧ ಟಿಕೆಟ್‌ ಮಾರಾಟದ ಆರೋಪ ಮಾಡಿರುವುದು ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತೆ ಆಗಿದೆ.

ಇವರಿಬ್ಬರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಯಾದ ಬಳಿಕ ಕಾಂಗ್ರೆಸ್‌ ವಿರುದ್ಧ ಟಿಕೆಟ್‌ ಮಾರಾಟದ ಆರೋಪ ಮಾಡಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮಗೆ ಟಿಕೆಟ್‌ ಕೈತಪ್ಪಲು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಕಾರಣವೆಂದು ಗುಡುಗಿರುವ ಗುರುಚರಣ್‌, 6 ತಿಂಗಳ ಹಿಂದೆಯೇ ಕಾಂಗ್ರೆಸ್‌ ಟಿಕೆಟ್‌ ಮಾರಾಟವಾಗಿದೆ, ಪಕ್ಷದ ಬಾವುಟ ಹಿಡಿಯದ ಹಾಗೂ ಬಾವುಟ ಕಟ್ಟದವರಿಗೆ ಟಿಕೆಟ್‌ ಕೊಡಲಾಗಿದೆ ಎನ್ನುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಕದಲೂರು
ಎಂ.ಉದಯ್‌ ವಿರುದ್ಧವೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್‌ ಹಾಳಾಗಲು ಸುರೇಶ್‌ ಕಾರಣವೆಂದು ಕಿಡಿ ಕಾರಿದ್ದಾರೆ.

ಇನ್ನೊಂದೆಡೆ ಮೊದೀನ್‌ ಬಾವಾ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 2 ಕೋಟಿ ರೂ. ಪಡೆದು ಇನಾಯತ್‌ ಅಲಿಗೆ ಟಿಕೆಟ್‌ ಕೊಟ್ಟಿದ್ದಾರೆಂದು ನೇರವಾಗಿ ಆರೋಪಿಸಿದ್ಧಾರೆ. ಇನಾಯತ್‌ ಅಲಿ ಒಬ್ಬ ಗುತ್ತಿಗೆದಾರನೇ ಹೊರತು ಪಕ್ಷದ ಕಾರ್ಯಕರ್ತನೇ ಅಲ್ಲ. ಅಂಥವರಿಗೆ ಹಣ ಪಡೆದು ಟಿಕೆಟ್‌ ಕೊಟ್ಟಿದ್ದಾರೆಂದು ದೂರಿದರು.

ಮಧ್ಯರಾತ್ರಿ ಕೊನೇ ಪಟ್ಟಿ
ಕಾಂಗ್ರೆಸ್‌ ಪಕ್ಷವು ಬಾಕಿ ಉಳಿಸಿಕೊಂಡಿದ್ದ ತನ್ನ ಐದು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಮಧ್ಯರಾತ್ರಿ ಪ್ರಕಟಿಸಿದೆ. ಇದರೊಂದಿಗೆ ಕಾಂಗ್ರೆಸ್‌ 223 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಂತೆ ಆಗಿದೆ. ಮೇಲುಕೋಟೆಯಲ್ಲಿ ರೈತ ಸಂಘದ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿದೆ.

ಶಿಡ್ಲಘಟ್ಟದ ಹಾಲಿ ಶಾಸಕ ವಿ.ಮುನಿಯಪ್ಪ ಬದಲಿಗೆ ಬಿ.ವಿ.ರಾಜೀವ್‌ಗೌಡಗೆ ಟಿಕೆಟ್‌ ಕೊಡಲಾಗಿದೆ. ತೀವ್ರ ಜಿದ್ದಾಜಿದ್ದಿ ನಡೆದಿದ್ದ ಅರಕಲಗೂಡು ಕ್ಷೇತ್ರದ ಟಿಕೆಟ್‌ ಪಡೆಯುವಲ್ಲಿ ಎಚ್‌.ಪಿ.ಶ್ರೀಧರ ಗೌಡ ಯಶಸ್ವಿಯಾಗಿದ್ಧಾರೆ. ಪ್ರಬಲ ಆಕಾಂಕ್ಷಿಯಾಗಿದ್ದ ಕೃಷ್ಣೇಗೌಡರಿಗೆ ನಿರಾಸೆಯಾಗಿದೆ.

ಸಿ.ವಿ.ರಾಮನ್‌ ನಗರದಲ್ಲೂ ಅಚ್ಚರಿ ಅಭ್ಯರ್ಥಿಯಾಗಿ ಪಾಲಿಕೆ ಮಾಜಿ ಸದಸ್ಯ ಎಸ್‌.ಆನಂದಕುಮಾರ್‌ ಅವರನ್ನು ಕಣಕ್ಕಿಳಿಸಲಾಗಿದೆ. ಇಲ್ಲಿಂದ ಮಾಜಿ ಮೇಯರ್‌ ಸಂಪತ್‌ ರಾಜ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದರು.