ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿಗೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಸೆಂಟರ್ ಆಫ್ ಎಕ್ಸಲೆನ್ಸ್ ಮಾನ್ಯತೆ ನೀಡಿದೆ.
ಸಂಶೋಧನೆಗೆ ಅತ್ಯುತ್ತಮ ಸಂಸ್ಥೆ ಎಂದು ಗುರುತಿಸಿ, ಇನ್ನೂ ಹೆಚ್ಚಿನ ಸಂಶೋಧನೆಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹಾಗೂ ಈ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಗೊಳಿಸಲು, ಅಗತ್ಯ ಅನುದಾನದೊಂದಿಗೆ ಆಯುಷ್ ಮಂತ್ರಾಲಯ ಈ ಮಾನ್ಯತೆ ನೀಡಿದೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ 1986ರಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಕ್ಷೇತ್ರದಲ್ಲಿ ಪ್ರಾರಂಭಿಸಿದರು. ನಂತರ ಅಲ್ಲಿ ಚಿಕಿತ್ಸೆ ಪಡೆದ ಫಲಾನುಭವಿಗಳ ಅನುಭವಗಳಿಂದ ಪ್ರಭಾವಿತರಾಗಿ 1989ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಪದವಿ ನೀಡುವ ಮಹಾವಿದ್ಯಾಲಯವನ್ನು ಉಜಿರೆಯಲ್ಲಿ ಪ್ರಾರಂಭಿಸಿದರು.
15 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು ಇಂದು 120 ವಿದ್ಯಾರ್ಥಿಗಳ ಪ್ರವೇಶಾತಿ ಹೊಂದಿದೆ. ದೇಶ-ವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾಲಯ ಹಲವು ಪ್ರಥಮಗಳಿಗೆ ನಾಂದಿಹಾಡಿದ್ದು, 2010ರಲ್ಲಿ ಸ್ನಾತಕೋತ್ತರ ಪದವಿ ಆರಂಭವಾಗಿ, 2016ರಲ್ಲಿ ಪಿಎಚ್.ಡಿ ವಿಭಾಗದ ಪದವಿಗೆ ಸರ್ಕಾರ ಮತ್ತು ವಿವಿ ಅನುಮತಿ ಪಡೆದಿದೆ. ವಿದ್ಯಾರ್ಥಿಗಳಿಗೆ ಕಲಿಕಾ ಕೇಂದ್ರವಾಗಿ ಶಾಂತಿವನದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಈ ಕಾಲೇಜಿಗೆ ಬೆನ್ನೆಲುಬಾಗಿದೆ. ರಾಜ್ಯಾದ್ಯಂತ ಈ ಚಿಕಿತ್ಸಾ ಪದ್ಧತಿಯನ್ನು ಸಾಮಾನ್ಯ ಜನರಿಗೂ ತಲುಪಿಸುವ ಉದ್ದೇಶದಿಂದ 2009ರಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ಸರ್ಕಾರಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿ ಹೊರರೋಗಿ ವಿಭಾಗ/ಘಟಕ ಪ್ರಾರಂಭಿಸಿ ಹಲವರಿಗೆ ಪ್ರಕೃತಿ ಚಿಕಿತ್ಸಾ ಸೌಲಭ್ಯ ಲಭಿಸುವಂತಾಗಿದೆ.
ಸಂಶೋಧನಾ ಕೇಂದ್ರ: ಹೆಗ್ಗಡೆಯವರ ಆಶಯದಂತೆ, 2011ರಲ್ಲಿ ಶಾಂತಿವನದಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸಲಾಯಿತು. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ದೇಹ ಹಾಗೂ ಕಾಯಿಲೆ ನಿವಾರಣೆಯಲ್ಲಿ ಎಷ್ಟು ಪರಿಣಾಮಕಾರಿ ಎಂದು ಸಂಶೋಧನಾತ್ಮಕವಾಗಿ ಜಗತ್ತಿಗೆ ತೋರಿಸುವ ಉದ್ದೇಶದಿಂದ ಸಂಶೋಧನಾ ವಿಭಾಗವನ್ನು ಪ್ರಾರಂಭಿಸಲಾಯಿತು. ಅದಕ್ಕೆ ಬೇಕಾದ ಸುಸಜ್ಜಿತ ಉಪಕರಣಗಳೊಂದಿಗೆ ಸಂಶೋಧನಾ ಘಟಕದಲ್ಲಿ 40ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಯೋಜನೆ ಮಹತ್ವ ಏನು?
ಜೀವನಶೈಲಿಯಿಂದ ಬರುವ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಬೊಜ್ಜುತನ, ಮುಂತಾದ ವ್ಯಾಧಿಗಳಿಗೆ ಈ ಯೋಜನೆಯಲ್ಲಿ ಮುಂದಿನ ಮೂರು ವರ್ಷ ಕಾಲ ವಿಶೇಷ ಸಂಶೋಧನೆಗಳು ನಡೆಯಲಿವೆ. ಈ ಸಂಶೋಧನೆಗಳಿಗೆ ಅಗತ್ಯವಾದ ಅತ್ಯಾಧುನಿಕ ಆಸ್ಪತ್ರೆ, ಸಂಶೋಧನಾ ಉಪಕರಣಗಳು ಹಾಗೂ ತಜ್ಞ ಸಂಶೋಧನಾ ತಂಡವನ್ನು ನಿಯೋಜಿಸಲಿದೆ. ಈ ಸಂಶೊಧನೆಯು ವೈದ್ಯಕೀಯ ಕ್ಷೇತ್ರಕ್ಕೇ ಹೊಸ ದಿಕ್ಸೂಚಿ ನೀಡಲಿದೆ. ಈ ಸಂಶೋಧನಾ ಕೇಂದ್ರ ಪದವಿ, ಸ್ನಾತಕೊತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ.
ಇಂದು ಶಿಲಾನ್ಯಾಸ ಕಾರ್ಯಕ್ರಮ
ಸಂಶೋಧನಾ ಕೇಂದ್ರದ ನೂತನ ಕಟ್ಟಡಕ್ಕೆ ಸೆ.24ರಂದು ಭಾರತ ಸರ್ಕಾರದ ಆಯುಷ್ ಮಂತ್ರಿ ಶಿಲಾನ್ಯಾಸ ಮಾಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರಿನ ರಾಜೀವ ಗಾಂಧಿ ವಿವಿ ಉಪಕುಲಪತಿ ಡಾ.ಸಚ್ಚಿದಾನಂದ ಅತಿಥಿಗಳಾಗಿ ಭಾಗವಹಿಸುವರು. ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆ ಉಪಾಧ್ಯಕ್ಷ ಪ್ರೊ. ಪ್ರಭಾಕರ್, ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ ಉಪಸ್ಥಿತರಿರುವರು.