Friday, September 20, 2024
ಸುದ್ದಿ

ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ “ಖಜಾನೆ’ ಖಾಲಿ – ಕಹಳೆ ನ್ಯೂಸ್

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ  ಅನ್ನಭಾಗ್ಯ ಯೋಜನೆ “ಖಜಾನೆ’ ಸದ್ದಿಲ್ಲದೇ ಖಾಲಿಯಾಗುತ್ತಿದ್ದು, ಎರಡು ತಿಂಗಳ ಬಳಿಕ ಏನು ಮಾಡಬೇಕು ಅನ್ನೋ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.

ಅನ್ನಭಾಗ್ಯ ಯೋಜನೆಗೆ ಈ ವರ್ಷದ ಬಜೆಟ್‌ನಲ್ಲಿ 3,600 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಹಣ ಇನ್ನೆರಡು ತಿಂಗಳಲ್ಲಿ ಮುಗಿದು ಹೋಗುತ್ತದೆ. ಡಿಸೆಂಬರ್‌ನಲ್ಲಿ ಅನ್ನಭಾಗ್ಯದ ಖಜಾನೆ ಬರಿದಾದರೆ ಹಣ ಎಲ್ಲಿಂದ, ಯೋಜನೆ ಮುಂದುವರಿಸೋದು ಹೇಗೆ ಎಂಬುದು ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಬಜೆಟ್‌ನಲ್ಲಿ ಘೋಷಿಸಿರುವ ಪರಿಷ್ಕೃತ ಅನ್ನಭಾಗ್ಯ ಯೋಜನೆಯ ಲೆಕ್ಕದಂತೆ, ಅದಕ್ಕೆ ಬೇಕಾಗುವ 3,600 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ, ಪರಿಷ್ಕೃತ ಯೋಜನೆಯ ಬಗ್ಗೆ ಈವರೆಗೆ ಯಾವುದೇ ತೀರ್ಮಾನ ಆಗಿಲ್ಲ. ಸದ್ಯ ಆಗುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ.  ಹಾಗಾಗಿ ಈಗಲೂ ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಯೇ ಮುಂದುವರಿದಿದೆ.

ಹಾಲಿ ಜಾರಿಯಲ್ಲಿರುವಂತೆ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯನಿಗೆ ಏಳು ಕೆ.ಜಿ ಅಕ್ಕಿ ಹಾಗೂ ಒಂದು ಕುಟುಂಬಕ್ಕೆ ತಲಾ 1 ಕೆ.ಜಿ ತೊಗರಿ ಬೇಳೆ ಕೊಡಬೇಕಾದರೆ, 2019ರ ಮಾರ್ಚ್‌ವರೆಗೆ ಒಟ್ಟು 5,100 ಕೋಟಿ ರೂ. ಬೇಕು. ಆದರೆ, ಈಗ ಕೊಟ್ಟಿರುವುದು 3,600 ಕೋಟಿ ರೂ. ಮಾತ್ರ. ಹೆಚ್ಚುವರಿಯಾಗಿ ಇನ್ನೂ 1,500 ಕೋಟಿ ರೂ. ಬೇಕು. ಈಗಿರುವ ಹಣ ಅಬ್ಬಬ್ಟಾ ಅಂದರೆ ಡಿಸೆಂಬರ್‌ ತನಕ ಆಗುತ್ತದೆ. ಹೆಚ್ಚುವರಿ ಹಣ ಸರ್ಕಾರ ಕೊಡದಿದ್ದರೆ, ಜನವರಿಯಿಂದ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಹೆಚ್ಚುವರಿ 2 ಕೆ.ಜಿ. ಅಕ್ಕಿ ಖರೀದಿಸಲು ಹಣ ಇರುವುದಿಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಪ್ರಸ್ತುತ ರಾಜ್ಯದಲ್ಲಿ ಎಎವೈ, ಎಪಿಎಲ್‌, ಬಿಪಿಎಲ್‌ನ 1.40 ಕೋಟಿ ಪಡಿತರ ಚೀಟಿಗಳ 4.76 ಕೋಟಿ ಫ‌ಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ಏಳು ಕೆ.ಜಿ ಅಕ್ಕಿ ಉಚಿತವಾಗಿ ಹಾಗೂ ಪ್ರತಿ ಕುಟುಂಬ ರಿಯಾಯಿತಿ ದರದಲ್ಲಿ 1 ಕೆ.ಜಿ ತೊಗರಿ ಬೇಳೆ ನೀಡಲಾಗುತ್ತಿದೆ. ತಿಂಗಳಿಗೆ ಒಟ್ಟು 2.80 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಹಾಗೂ 13 ಸಾವಿರ ಮೆಟ್ರಿಕ್‌ ಟನ್‌ ತೊಗರಿಬೇಳೆ ಬೇಕು. ಇದರಲ್ಲಿ 5 ಕೆ.ಜಿಯಂತೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 2.17 ಲಕ್ಷ ಮೆಟ್ರಕ್‌ ಟನ್‌ ಅಕ್ಕಿ ಮಾತ್ರ ಕೊಡುತ್ತಿದ್ದು, ಹೆಚ್ಚುವರಿ 2 ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಫ‌ಲಾನುಭವಿಗಳಿಗೆ ನೀಡುತ್ತದೆ. ಜತೆಗೆ 1 ಕೆ.ಜಿ ತೊಗರಿ ಬೇಳೆ ಸಹ ರಾಜ್ಯ ಸರ್ಕಾರವೇ ನೀಡುತ್ತಿದೆ.

ಹೆಚ್ಚುವರಿಯಾಗಿ 2 ಕೆ.ಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ಪ್ರತಿ ತಿಂಗಳು ಮುಕ್ತ ಮಾರುಕಟ್ಟೆಯಲ್ಲಿ 63 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಖರೀದಿ ಮಾಡುತ್ತದೆ. ಇದಕ್ಕಾಗಿ ತಿಂಗಳಿಗೆ ಕನಿಷ್ಠ 160ರಿಂದ 200 ಕೋಟಿ ರೂ. ಬೇಕು. ಅದೇ ರೀತಿ ಪ್ರತಿ ಬಿಪಿಎಲ್‌ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ 1 ಕೆ.ಜಿ ತೊಗರಿ ಬೇಳೆ ನೀಡಲು ರಾಜ್ಯ ಸರ್ಕಾರ ಪ್ರತಿ ತಿಂಗಳು 163 ಮೆಟ್ರಿಕ್‌ ಟನ್‌ ತೊಗರಿ ಬೇಳೆ ಖರೀದಿಸುತ್ತದೆ. ಇದಕ್ಕಾಗಿ ಅಂದಾಜು ತಿಂಗಳಿಗೆ 300 ಕೋಟಿ ರೂ. ವೆಚ್ಚವಾಗುತ್ತದೆ. ಹೀಗಾಗಿ, ಹಳೆಯ ಅನ್ನಭಾಗ್ಯ ಯೋಜನೆ ಮುಂದುವರಿಸಬೇಕಾದರೆ ಸರ್ಕಾರ ಹೆಚ್ಚುವರಿ ಹಣ ಕೊಡಲೇಬೇಕು. ಇಲ್ಲದಿದ್ದರೆ ಏನೂ ಮಾಡಕ್ಕಾಗಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಗೊಂದಲ ಬಗೆಹರಿದಿಲ್ಲ
ಸದ್ಯಕ್ಕಂತೂ ಹಳೆಯ ಅನ್ನಭಾಗ್ಯ ಯೋಜನೆಯಂತೆ ಪಡಿತರ ವಿತರಿಸಲಾಗುತ್ತದೆ. ಆದರೆ, ಪರಿಷ್ಕೃತ ಯೋಜನೆಯಂತೆ ಒಬ್ಬ ಫ‌ಲಾನುಭವಿಗೆ 5 ಕೆ.ಜಿ ಅಕ್ಕಿ, ಒಬ್ಬ ವ್ಯಕ್ತಿಗೆ ಅರ್ಧ ಕೆ.ಜಿ. ತೊಗರಿ ಬೇಳೆ, ಪ್ರತಿ ಕುಟುಂಬಕ್ಕೆ ಕ್ರಮವಾಗಿ 1 ಕೆ.ಜಿ ಸಕ್ಕರೆ, ತಾಳೆ ಎಣ್ಣೆ, ಹಾಗೂ ಉಪ್ಪು ನೀಡುವ ಪ್ರಸ್ತಾವನೆಯೂ ಸಿದ್ಧಗೊಂಡಿದ್ದು, ಸಚಿವ ಸಂಪುಟದ ಪರಿಶೀಲನೆಯಲ್ಲಿದೆ. ಈ ಮಧ್ಯೆ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಕಾಂಗ್ರೆಸ್‌ ಪಕ್ಷ ಹಾಗೂ ಆಹಾರ ಸಚಿವರು ಪಟ್ಟು ಹಿಡಿದಿದ್ದಾರೆ.ಅ.1ರಿಂದ ಪರಿಷ್ಕೃತ ಯೋಜನೆ ಜಾರಿಗೆ ಬರಬೇಕಿತ್ತು. ಸದ್ಯ ಅಂತಹ ಲಕ್ಷಗಳು ಕಾಣುತ್ತಿಲ್ಲ. ರೈತರ ಸಾಲ ಮನ್ನಾದ ಈ ಗಲಾಟೆಯಲ್ಲಿ ಹೆಚ್ಚುವರಿಯಾಗಿ ಬೇಕಾಗಿರುವ 1,500 ಕೋಟಿ ರೂ. ನೀಡಲು ಹಣಕಾಸು ಇಲಾಖೆ ಒಪ್ಪಿಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿಲ್ಲ. ಹಣ ಸಿಗದಿದ್ದರೆ ಹೆಚ್ಚುವರಿಯಾಗಿ 2 ಕೆ.ಜಿ ಅಕ್ಕಿ ಕೊಡುವುದು ಕಷ್ಟ. ಬೇಗ ತೀರ್ಮಾನ ಆಗಿದ್ದರೆ, ಪರಿಷ್ಕೃತ ಯೋಜನೆಗೆ ಸಿದ್ದತೆ ಮಾಡಿಕೊಳ್ಳುವುದು ದುಸ್ತರ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.