ಮೈಸೂರು: ನಟ ದರ್ಶನ್ ಅವರ ಕಾರು ಅಪಘಾತವಾಗಿ ದರ್ಶನ್, ಪ್ರಜ್ವಲ್ ದೇವರಾಜ್, ಹಿರಿಯ ನಟ ದೇವರಾಜ್ ಗಾಯಗೊಂಡಿದ್ದರೂ ಘಟನಾ ಸ್ಥಳದ ಬಗ್ಗೆ, ಚಾಲಕನ ಬಗ್ಗೆ ದರ್ಶನ್ ಸ್ನೇಹಿತರು ಪೊಲೀಸರಿಗೂ ಹೆಚ್ಚಿನ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ.
ಯಾರಿಗೆ ಏನೂ ಆಗಿಲ್ಲ. ನಮಗೆ ಕ್ಲೈಮ್ ಕೂಡ ಬೇಕಾಗಿಲ್ಲ. ಪೊಲೀಸರ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣ ಕೂಡ ದಾಖಲಾಗಿಲ್ಲ. ಹಾಗಾಗಿ ಕಾರು ಅಪಘಾತದ ಬಗ್ಗೆ ನಮಗೆ ಹೆಚ್ಚೇನೂ ಹೇಳಲು ಆಗುತ್ತಿಲ್ಲ ಎಂದು ವಿವಿ ಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಪಘಾತವಾದ ಬಳಿಕ ಕಾರಿನೊಂದಿಗೆ ಚಾಲಕನೂ ನಾಪತ್ತೆಯಾಗಿದ್ದಾನೆ. ಅಪಘಾತ ನಡೆದ ಸ್ಥಳದಲ್ಲಿಯೂ ಕಾರು ಇಲ್ಲ. ಆ ಚಾಲಕ ಸಿಕ್ಕಿದ್ದರೂ ಆತನ ಬಗ್ಗೆಯೂ ದರ್ಶನ್ ಆಪ್ತರು ಏನೂ ಮಾಹಿತಿ ನೀಡುತ್ತಿಲ್ಲ. ತನಿಖೆ ಹೇಗೆ ನಡೆಸುವುದು ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ.
ಗಾಯಗೊಂಡ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನ್ ಕೈ ಶಸ್ತ್ರಚಿಕಿತ್ಸೆ ಮುಗಿದಿದ್ದು, ಎದೆ ಭಾಗಕ್ಕೆ ಗಾಯಗೊಂಡಿರುವ ದೇವರಾಜ್ ಅವರಿಗೆ ಇನ್ನು ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎನ್ನಲಾಗಿದೆ.
ದರ್ಶನ್ ಆರೋಗ್ಯ ವಿಚಾರಿಸಲು ಅವರ ಪತ್ನಿ ವಿಜಯಲಕ್ಷ್ಮೀ ಆಗಮಿಸಿದ್ದರು. ಇನ್ನು ಆಸ್ಪತ್ರೆಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಅವರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಅಪಘಾತ ನಡೆದ ಸ್ಥಳವನ್ನು ಪೊಲೀಸರಿಗೆ ಹೇಳಲು ದರ್ಶನ್ ಸ್ನೇಹಿತರು ನಿರಾಕರಿಸಿದ್ದಾರೆ. ಆದರೆ ಜೆಎಸ್ಎಸ್ನ ಹರ್ಬನ್ ಹಾತ್ ಬಳಿ ಅಪಘಾತ ನಡೆದಿದ್ದು, ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಒಂದು ವಿದ್ಯುತ್ ಕಂಬ ಉರುಳಿದೆ.