ಚಿತ್ರದುರ್ಗ: ತನ್ನ ಸರ್ಕಾರ ರಚನೆ ಮಾಡಿಕೊಳ್ಳಲು ಬಿಜೆಪಿ ಆತುರದಲ್ಲಿದೆ. ಅತಿಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಬಿಡಬೇಕೆಂಬ ಕಾತುರ ಆ ಪಕ್ಷದ ನಾಯಕರಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿರಿಗೆರೆಯ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಸರ್ಕಾರ ರಚಿಸುವ ಆತುರದಲ್ಲಿರುವ ಬಿಜೆಪಿ, ನೆರೆಪೀಡಿತ ಕೊಡುಗಿಗೆ ವಿಶೇಷ ಪ್ಯಾಕೇಜ್ ಕೇಳಲು ಕೇಂದ್ರಕ್ಕೆ ರಾಜ್ಯದ ನಿಯೋಗ ತೆರಳಿದಾಗ ಅದರ ಜತೆಗೆ ಏಕೆ ಹೋಗಲಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜಕೀಯ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಇರಬೇಕು. ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಇಂಧನದ ಮೇಲಿನ ತೆರಿಗೆ ಇಳಿಸಿರುವುದು ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ರಾಜ್ಯಗಳು ಮಾತ್ರ. ರಾಷ್ಟ್ರೀಯ ಪಕ್ಷಗಳಲ್ಲಿ ಎಲ್ಲದಕ್ಕೂ ಹೈಕಮಾಂಡ್ ಕಡೆ ನೋಡಬೇಕಾಗುತ್ತೆ,” ಎಂದು ತಿಳಿಸಿದರು.
ಸಮನ್ವಯ ಸಮಿತಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ನ ರಾಜ್ಯಾಧ್ಯಕ್ಷರನ್ನು ನೇಮಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಎರಡೂ ಪಕ್ಷದ ಅಧ್ಯಕ್ಷರೂ ಸಮನ್ವಯ ಸಮಿತಿಯಲ್ಲಿರಬೇಕು. ಆದರೆ, ಇಲ್ಲ. ಇದಕ್ಕೇನು ಕಾರಣ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ,” ಎಂದು ಅವರು ಮಾರ್ಮಿಕವಾಗಿ ಮಾತನಾಡಿದರು.
ಇನ್ನು ಪಕ್ಷದ ಸಂಘಟನೆ ಕುರಿತು ಮಾತನಾಡಿದ ಅವರು, “ವಾರದೊಳಗೆ ಪಕ್ಷದ ರಾಜ್ಯ ಸಮಿತಿಯನ್ನು ಮರುರಚನೆ ಮಾಡಲಾಗುವುದು. ನಂತರ ಜಿಲ್ಲಾ ಸಮಿತಿಗಳನ್ನೂ ಹೊಸದಾಗಿ ರಚಿಸಲಾಗುವುದು,” ಎಂದು ತಿಳಿಸಿದರು.