Recent Posts

Sunday, January 19, 2025
ರಾಜಕೀಯಸುದ್ದಿ

ಮೇಲ್ಮನೆ ಚುನಾವಣೆ ಕಣದಿಂದ ಹಿಂದೆ ಸರಿಯಲು ಬಿಜೆಪಿ ಅಚ್ಚರಿಯ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದೇ ಬಿಂಬಿಸಲಾಗಿದ್ದು ರಾಜ್ಯ ರಾಜಕೀಯದ ಗೊಂದಲಗಳಿಗೆ ಕ್ಲೈಮಾಕ್ಸ್​ ಆಗಲಿದೆ ಎಂದು ಪ್ರಚಾರ ಪಡೆದುಕೊಂಡಿದ್ದ ವಿಧಾನ ಪರಿಷತ್​ ಉಪ ಚುನಾವಣೆಯ ಕಣಕ್ಕೆ ತನ್ನ ಅಭ್ಯರ್ಥಿಗಳನ್ನು ಇಳಿಸದಿರಲು ಬಿಜೆಪಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಬಿಜೆಪಿಯಿಂದ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್​, ಬಿ.ಜೆ.ಪುಟ್ಟಸ್ವಾಮಿ, ಮಾಲೀಕಯ್ಯ ಗುತ್ತೇದಾರ್​​ ಅವರನ್ನು ಕಣಕ್ಕಿಳಿಸಲು ಈ ಹಿಂದೆ ನಿರ್ಧಾರ ಕೈಗೊಂಡಿತ್ತು. ಸಂಖ್ಯಾಬಲವಿಲ್ಲದಿದ್ದರೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಬಿಜೆಪಿಯ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿದೆ ಎನ್ನಲಾದ ಅಸಮಾಧಾನ, ಶಾಸಕರ ಭಿನ್ನಮತವನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ತಂತ್ರವಾಗಿತ್ತಾದರೂ, ಸದ್ಯ ಕಣದಿಂದ ಹಿಂದೆ ಸರಿದಿರುವ ಬಿಜೆಪಿಯ ನಿರ್ಧಾರ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗತ್ಯ ಸಂಖ್ಯಾಬಲ ಇಲ್ಲದ ಕಾರಣದಿಂದ ಕಣದಿಂದ ಹಿಂದೆ ಸರಿಯಲು ಬಿಜೆಪಿ ನಿರ್ಧರಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಷತ್​ ಉಪಚುನಾವಣೆಯಲ್ಲಿ ಗುಪ್ತ ಮತದಾನ ನಡೆಯುವುದರಿಂದ ಕಾಂಗ್ರೆಸ್​-ಜೆಡಿಎಸ್​ನ ಕೆಲ ಶಾಸಕರು ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಹೀಗೇನಾದರೂ ಆಗಿ ಬಿಜೆಪಿ ಗೆದ್ದಿದ್ದರೆ, ಸರ್ಕಾರಕ್ಕೆ ಸಂಖ್ಯಾ ಬಲವಿಲ್ಲ ಎಂಬುದು ಸಾಬೀತಾಗಿ, ಅದು ಸರ್ಕಾರವನ್ನೇ ಬೀಳಿಸುವ ಹಂತಕ್ಕೆ ತಲುಪುವ ಸಾಧ್ಯತೆಗಳು ಗೋಚರಿಸಿದ್ದವು. ಆದರೀಗ ಆ ವಾದಗಳೆಲ್ಲ ನೆಲೆ ಕಳೆದುಕೊಂಡಂತಾಗಿದೆ.

ಡಾ. ಜಿ. ಪರಮೇಶ್ವರ್​, ಕೆ.ಎಸ್​ ಈಶ್ವರಪ್ಪ ಮತ್ತು ವಿ.ಸೋಮಣ್ಣ ಅವರು ಈ ಹಿಂದೆ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗಿದ್ದರು. ಈ ಮೂವರು ಈ ಬಾರಿಯ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿರುವುದರಿಂದ ಮೇಲ್ಮನೆ ಸ್ಥಾನ ತೆರವಾಗಿದೆ. ಈ ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಸೆ.24ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದ್ದು, ಅ.4ಕ್ಕೆ ಚುನಾವಣೆ ನಿಗದಿಯಾಗಿದೆ. ಆದರೆ, ಬಿಜೆಪಿ ಕಣದಿಂದ ಹಿಂದೆ ಸರಿದಿರುವುದರಿಂದ ಕಾಂಗ್ರೆಸ್​ ಜೆಡಿಎಸ್​ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.

ಕಾಂಗ್ರೆಸ್​ನಿಂದ ಎಂ.ಸಿ. ವೇಣುಗೋಪಾಲ್​, ನಾಸೀರ್​ ಅಹ್ಮದ್​ ಅವರ ಹೆಸರು ಅಂತಿಮಗೊಂಡಿದೆ. ಜೆಡಿಎಸ್​ನಿಂದ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್​ ಅವರ ಹೆಸರನ್ನು ಅಖೈರುಗೊಳಿಸಲಾಗಿದೆ ಎಂದು ಗೊತ್ತಾಗಿದೆ.