ಸುಳ್ಯ: ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಜಾತಿ, ಧರ್ಮ, ಭಾಷೆ, ದೇಶಗಳ ಎಲ್ಲೆಯನ್ನು ಮೀರಿದ ವಿಶ್ವವ್ಯಾಪಿ ಚಿಂತನೆ. ವಿಶ್ವಮಾನವರಾದ ವಿವೇಕಾನಂದರನ್ನು ಮತ್ತು ಅವರ ವಿಚಾರಧಾರೆಗಳನ್ನು ಅರಿತರೆ ಈ ಜಗತ್ತನ್ನೇ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಯುವಾ ಬ್ರಿಗೇಡ್‍ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಮತ್ತು ಸೋದರಿ ನಿವೇದಿತಾರ 150ನೇ ವರ್ಷಾಚರಣೆಯ ಅಂಗವಾಗಿ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವೇಕಾನಂದರನ್ನು ಅರಿತರೆ ನಿಜವಾದ ಧರ್ಮ, ದೇಶ, ದೇಶ ಭಕ್ತಿ ಏನು ಎಂಬುದು ತಿಳಿಯುತ್ತದೆ. 125 ವರ್ಷಗಳ ಹಿಂದೆ ಅಮೇರಿಕಾದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ನಾಲ್ಕು ನಿಮಿಷದ ಭಾಷಣವು ನಮ್ಮ ದೇಶದ ಮತ್ತು ಧರ್ಮದ ಬಗ್ಗೆ ಜಗತ್ತಿಗಿದ್ದ ಕಲ್ಪನೆಯನ್ನು ಬದಲಿಸಿ ಬಿಟ್ಟತು. ನಮ್ಮ ಧರ್ಮದ ಮಹತ್ವ ಏನು ಎಂಬುದನ್ನು ತಿಳಿಸಿರುವುದರ ಜೊತೆಗೆ ಉಳಿದ ಧರ್ಮಗಳು, ಮತಗಳು ಹೇಗಿರಬೇಕು ಎಂಬುದನ್ನು ಬೋಧಿಸಿದರು. ಆದುದರಿಂದಲೇ 125 ವರ್ಷಗಳ ಬಳಿಕವೂ ಆ ಭಾಷಣದ ಮಹತ್ವ ಹಾಗೆಯೇ ಉಳಿದುಕೊಂಡಿದೆ.
ವಿವೇಕಾನಂದರ ಆದರ್ಶವನ್ನು ಅನುಸರಿಸಿ ದೇಶಕ್ಕೆ ಹೇಗೆ ಸೇವೆ ಮಾಡಬಹುದು ಎಂಬುದನ್ನು ಸೋದರಿ ನಿವೇದಿತಾ ತೋರಿಸಿಕೊಟ್ಟಿದ್ದಾರೆ. ಈಗ ದೇಶ ಮತ್ತೊಮ್ಮೆ ವಿಶ್ವ ಮಾನ್ಯವಾಗುವತ್ತ ಮುನ್ನಡೆದಿದೆ. ವಿವೇಕಾನಂದರ ಆದರ್ಶದಲ್ಲಿ ಮುನ್ನಡೆದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಎಲ್ಲರೂ ಕೈ ಜೋಡಿಸಬೇಕು. ವಿವೇಕಾನಂದರು ನಮ್ಮ ಹೃದಯದಲ್ಲಿ ಹೊಕ್ಕರೆ ಜೀವನದ ಪಥವೇ ಬದಲಾಗುತ್ತದೆ ಎಂದರು.
ಅರಂಬೂರು ಶ್ರೀ ಕಾಂಚಿ ಕಾಮ ಕೋಟಿ ವೇದ ವಿದ್ಯಾಲಯದ ಪ್ರಾಚಾರ್ಯ ವೆಂಕಟೇಶ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಯುವ ಬ್ರಿಗೇಡ್‍ನ ಪಂಚಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ರಾಮಚಂದ್ರ ಸ್ವಾಗತಿಸಿ, ಲತಾ ಮಧುಸೂಧನ್ ವಂದಿಸಿದರು. ಮಹಾಲಕ್ಷ್ಮಿ ಮರ್ಕಂಜ ಪ್ರಾರ್ಥಿಸಿದರು. ಪ್ರಾಂಜಲಿ ಕಾನತ್ತೂರು ವಂದೇ ಮಾತರಂ ಹಾಡಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭಕ್ಕೆ ಮುನ್ನ ಸುಳ್ಯ ನಗರದ ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯತು. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳೀತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.