ಮಂಗಳೂರು, ಸೆ 25 : ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಮೇಳಕ್ಕೆ ಸಂಬಂಧಿಸಿದ ಯಕ್ಷ ಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್ ನ ವ್ಯವಹಾರಗಳ ಸಮರ್ಪಕವಾಗಿಲ್ಲ ಎಂಬುದಾಗಿ ಜಿಲ್ಲಾಧಿಕಾರಿಗಳು ಎರಡು ತಿಂಗಳ ಹಿಂದೆ ಸರಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ಈಗ ಟ್ರಸ್ಟ್ ನ ವಿರುದ್ದ ಪೊಲೀಸ್ ತನಿಖೆಗೆ ಮಂಗಳೂರಿನ 3 ನೇ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್ . ಸಿ ನ್ಯಾಯಾಲಯ ಸೂಚಿಸಿದೆ. ಅದರಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಗಮನಕ್ಕೆ ತಾರದೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿಗಳ ನಿಯಮ ಉಲ್ಲಂಘಿಸಿ, ವಂಚನೆ ಮಾಡಿ ಹಣ ಮಾಡುವ ಉದ್ದೇಶದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಧರ್ಮ ಭೋದಿನಿ ಚಾರಿಟೇಬಲ್ ಟ್ರಸ್ಟ್ ರಚಿಸಲಾಗಿದೆ ಎಂದು ಕಟೀಲು ಮೇಳದ ಮಾಜಿ ಕಲಾವಿದ ಮಾಧವ ಬಂಗೇರಾ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಅಂತೆಯೇ ಬಜ್ಪೆ ಠಾಣೆಯ ಪೊಲೀಸರು ಕಟೀಲು ಟ್ರಸ್ಟ್ ನ ಅಧ್ಯಕ್ಷರ ಸಹಿತ ಆಡಳಿತ ಮಂಡಳಿ ವಿರುದ್ದ ಸೆ.22 ಶನಿವಾರ ಕೇಸು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ೧೦ ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅಧ್ಯಕ್ಷ ರಾಘವ ಆಚಾರ್ಯ ಹಾಗೂ ಕಾರ್ಯದರ್ಶಿ ಶಿವಾಜಿ ಶೆಟ್ಟಿ, ಟ್ರಸ್ಟಿಗಳಾದ ಶ್ರೀನಿವಾಸ್ ಭಟ್ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ರವಿರಾಜ್ ಆಚಾರ್ಯ, ಭುಜಂಗ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಉದಯನಂದ ಶೆಟ್ಟಿ, ಮತ್ತು ರಾಮಣ್ಣ ಶೆಟ್ಟಿ ಸೇರಿದಂತೆ ಹತ್ತು ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ನ್ಯಾಯಾಲದ ಆದೇಶದಂತೆ ಆರೋಪಿಗಳ ವಿರುದ್ದ 406,417,418,420,109 ಮತ್ತು 120 ಬಿ ಸೆಕ್ಷನ್ ಗಳಡಿ ಕೇಸು ದಾಖಲಿಸಿಕೊಳ್ಳಲಾಗಿದೆ. ಬಜ್ಪೆ ಪೊಲೀಸರು ಎಫ್. ಐ.ಆರ್ ಪ್ರತಿಯನ್ನು ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ಪೊಲೀಸರು ತನಿಖೆ ನಡೆಸಿ ಡಿಸೆಂಬರ್ 27 ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದೆ.