Recent Posts

Sunday, January 19, 2025
ಸುದ್ದಿ

ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭ – ಕಹಳೆ ನ್ಯೂಸ್

ಕನ್ನಡದ ಬಹು ಮುಖ್ಯ ಕಥೆಗಾರರಾದ ರಾಘವೇಂದ್ರ ಪಾಟೀಲರ ಹೆಸರಿನಲ್ಲಿ ಕಥಾ ಪ್ರಶಸ್ತಿ ನೀಡುವ ಮೂಲಕ ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಉತ್ತಮ ಕಾರ್ಯವನ್ನು ಮಾಡುತ್ತಿವೆ. ಪಾಟೀಲರ ಬದುಕಿನ ಆದರ್ಶ ಮತ್ತು ಸಾಹಿತ್ಯಕ ಧೋರಣೆಗಳನ್ನು ಅನುಸರಿಸುವುದರೊಂದಿಗೆ ಯೋಗ್ಯ ಬರಹಗಾರರನ್ನು ಆಯ್ದು ಪ್ರಶಸ್ತಿಯನ್ನು ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕನ್ನಡದ ಮಹತ್ವದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಹೇಳಿದರು.

ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ರಂಗಾಯಣದಲ್ಲಿ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಲಾಬಿ, ಸ್ವಜನ ಪಕ್ಷಪಾತಗಳಿಗೆ ಒಳಗಾಗದೆ, ಪಾರದರ್ಶಕ ನೀತಿಯ ಮೂಲಕ ಸತ್ಪಾತ್ರರಿಗಷ್ಟೇ ಯೋಗ್ಯತೆಯನ್ನು ಕಲ್ಪಿಸುವ ಇಂಥ ಯೋಜನೆಗಳು ಭವಿಷ್ಯದಲ್ಲಿ ಯಶಸ್ಸು ಕಾಣಲಿ ಎಂದು ಅವರು ಅಭಿಪ್ರಾಯ ಪಟ್ಟರು.

ಖ್ಯಾತ ಕಾದಂಬರಿಕಾರ ಎಂ. ಆರ್. ದತ್ತಾತ್ರಿಯವರು ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಕಾದಂಬರಿಯ ಕುರಿತು ಮಾತನಾಡಿದರು. ಯುವ ವಿಮರ್ಶಕ ಮತ್ತು ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀ ವಿಕಾಸ ಹೊಸಮನಿಯವರು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯ ಕುರಿತು ಮಾತನಾಡಿ, ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಮತ್ತು ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯ ಕುರಿತು ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠರು ಸಾಹಿತ್ಯ ವೇದಿಕೆಯ ಕಾರ್ಯ ಚಟುವಟಿಕೆಗಳು ಮತ್ತು ಪಾಟೀಲರ ಕುರಿತು ವಿಚಾರಗಳನ್ನು ಹಂಚಿಕೊಂಡರು. 72 ವಸಂತಗಳನ್ನು ಪೂರೈಸಿದ ಕನ್ನಡದ ಶ್ರೇಷ್ಠ ಕಥೆಗಾರ ರಾಘವೇಂದ್ರ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡದ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಮಹಾಂತೇಶ ನವಲಕಲ್ಲ ಮತ್ತು ಶ್ರೀಲೋಲ ಸೋಮಯಾಜಿಯವರಿಗೆ 2022ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯನ್ನು, ಪ್ರೊ. ರಾಘವೇಂದ್ರ ಪಾಟೀಲರು ವಾಸುದೇವ ನಾಡಿಗ್ ಮತ್ತು ಡಾ. ರತ್ನಾಕರ ಕುನುಗೋಡು ಅವರಿಗೆ ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಸಮಾರಂಭದಲ್ಲಿ ರಾಘವೇಂದ್ರ ಪಾಟೀಲರು ಸ್ವತಃ ತಾವೇ ಇಂಗ್ಲಿಷಿಗೆ ಅನುವಾದಿಸಿದ ‘ದೇಸಗತಿ’ ಕಥಾಸಂಕಲನದ ಇಂಗ್ಲಿಷ್ ಅನುವಾದ ‘In the Domain of White Herons’ ಕೃತಿಯನ್ನು ಖ್ಯಾತ ವಿಮರ್ಶಕ ಡಾ. ಎಂ. ಜಿ. ಹೆಗಡೆಯವರು ಬಿಡುಗಡೆಗೊಳಿಸಿದರು. ತಮ್ಮ ಕಥೆಗಳನ್ನು ತಾವೇ ಅನುವಾದ ಮಾಡುವ ಸವಾಲನ್ನು ಸ್ವೀಕರಿಸಿದ ಪಾಟೀಲರು ಅದರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಇಂಗ್ಲಿಷ್ ಅನುವಾದದ ಮೂಲಕ ಅವರ ಕತೆಗಳು ಇನ್ನಷ್ಟು ಅರ್ಥ ವಿಸ್ತಾರಗಳನ್ನು ಪಡೆದಿವೆ ಎಂದು ಅವರು ನುಡಿದರು.

ರಾಘವೇಂದ್ರ ಪಾಟೀಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟ ‘ತೇರು’ ಕಾದಂಬರಿಯನ್ನು ಹಿಂದಿಗೆ ಭಾಷಾಂತರಿಸಿದ ಹಿರಿಯ ಅನುವಾದಕಿ ಪ್ರೊ ಮಾಲತಿ ಆದವಾನಿಯವರ ಹಿಂದಿ ಅವತರಣಿಕೆ ‘ರಥ್’ ಅನ್ನು ಎಚ್. ಎಸ್. ವೆಂಕಟೇಶಮೂರ್ತಿಯವರು ಬಿಡುಗಡೆಗೊಳಿಸಿದರು.

ಕನ್ನಡದ ಪ್ರತಿಷ್ಠಿತ ಕಥಾ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೇದಿಕೆಯ ಮಹಾಪೋಷಕ ಡಾ. ಬಿ. ಸಿ. ಪ್ರಭಾಕರ, ಸಂಚಾಲಕ ವಿಕಾಸ ಹೊಸಮನಿ, ಎಂ. ಆರ್. ದತ್ತಾತ್ರಿ, ಸಂಕೇತ ಪಾಟೀಲ ಮತ್ತು ಡಾ. ಸುಭಾಷ್ ಪಟ್ಟಾಜೆಯವರನ್ನು ಎಚ್. ಎಸ್. ವೆಂಕಟೇಶ ಮೂರ್ತಿಯವರು ಅಭಿನಂದಿಸಿದರು.

ರಾಘವೇಂದ್ರ ಪಾಟೀಲರ ‘ಮಾಯಿಯ ಮುಖಗಳು’ ಕಥಾಸಂಕಲನಕ್ಕೆ 25 ವರ್ಷ ಮತ್ತು ‘ತೇರು’ ಕಾದಂಬರಿಗೆ 20 ವರ್ಷ ತುಂಬಿದ ಸವಿನೆನಪಿಗೆ ಶ್ರೀ ಆನಂದ ಝಂಜರವಾಡ ಮತ್ತು ಬಸು ಬೇವಿನಗಿಡದ ಆ ಕೃತಿಗಳ ಕುರಿತು ಮಾತನಾಡಿದರು.

ಮಹದೇವ ಹಡಪದ ತಂಡದವರು ಪ್ರಸ್ತುತ ಪಡಿಸಿದ ಪಾಟೀಲರ ‘ಮತ್ತೊಬ್ಬ ಮಾಯಿ’ ನಾಟಕ ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯೆ ಮೀನಾ ಮೈಸೂರು ಸ್ವಾಗತಿಸಿದರು. ಹನುಮಂತ ಕಾಖಂಡಕಿ ಕಾರ್ಯಕ್ರಮವನ್ನು ನಿರೂಪಿಸಿದರು.

ಇಡೀ ದಿನ ಅದ್ದೂರಿಯಾಗಿ ನಡೆದ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಹಿತ್ಯಪ್ರಿಯರು ಕಿಕ್ಕಿರಿದು ನೆರೆದು ಸಮಾರಂಭವನ್ನು ಯಶಸ್ವಿಗೊಳಿಸಿದರು