ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ- 2023ಕ್ಕೆ ಚಾಲನೆ – ಕಹಳೆ ನ್ಯೂಸ್
ಪುತ್ತೂರು : ಪಠ್ಯದ ಜತೆಗೆ ಪ್ರಾಯೋಗಿಕ ವಿಚಾರಗಳಿಗೆ ಸಮಾನ ಅವಕಾಶವನ್ನು ನೀಡಿದಾಗ ಮಾತ್ರ ಕಲಿಕೆ ಪೂರ್ಣವಾಗುತ್ತದೆ ಮತ್ತು ಸವಾಲನ್ನು ಸಮರ್ಥವಾಗಿ ಎದುರಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರವೀಶ್.ಪಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ನವದೆಹಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಪುತ್ತೂರು ಮತ್ತು ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ- 2023 ಕ್ಕೆ ಚಾಲನೆ ನೀಡಿ ಮಾತಾಡಿದರು. ಇಂತಹ ಕಾರ್ಯಾಗಾರಗಳು ಹೊಸ ಹೊಸ ವಿಚಾರಗಳನ್ನು ತಿಳಿಯುವುದಕ್ಕೆ ಸಹಕಾರಿಯಾಗುತ್ತವೆ ಮತ್ತು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ದಾರಿದೀಪವಾಗುತ್ತದೆ ಎಂದರು. ಪ್ರತಿಯೊಬ್ಬರೂ ಕೂಡಾ ತಾವು ಕಲಿತ ತಂತ್ರಜ್ಞಾನಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು, ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವ ಮೂಲಕ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಶ್ರೀ.ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಕಂಪೆನಿಗಳು ವಿದ್ಯಾರ್ಥಿಯ ಬುದ್ದಿಮತ್ತೆಯನ್ನು ಪರೀಕ್ಷಿಸುವ ಜತೆಯಲ್ಲಿ ಅವನ ಪ್ರಾಜೆಕ್ಟುಗಳು, ಅವನು ಭಾಗವಹಿಸಿದ ಕಾರ್ಯಾಗಾರಗಳ ಬಗ್ಗೆಯೂ ಗಮನಹರಿಸುತ್ತವೆ ಇದರಿಂದ ಇಂತಹ ಕಾರ್ಯಾಗಾರಗಳನ್ನು ನಮ್ಮ ಸಂಸ್ಥೆಯು ಆಗಾಗ ನಡೆಸುತ್ತದೆ ಎಂದರು. ಹೊಸ ವಿಷಯಗಳು ಸಂಶೋಧನೆಗಳಿಗೆ ದಾರಿ ಮಾಡಿಕೊಡುತ್ತವೆ ಇದರಿಂದ ಸ್ಟಾರ್ಟಪ್‍ಗಳು ಪ್ರಾರಂಭವಾಗುತ್ತವೆ, ಉದ್ಯಮಗಳು ಬೆಳೆಯುತ್ತವೆ. ಇದು ರಾಷ್ಟ್ರದ ಉನ್ನತಿಗೆ ಸಹಕಾರಿಯಾಗುತ್ತದೆ ಎಂದರು. ತಮ್ಮಲ್ಲಿರುವ ಕಲ್ಪನೆಗಳನ್ನು ಸಾಕಾರಗೊಳಿಸಿ ಉನ್ನತಿಯನ್ನು ಗಳಿಸಿ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಶುಭ ಹಾರೈಸಿದರು. ಇಲ್ಲಿ ಮಂಡಿಸಿದ ಎಲ್ಲಾ ಪ್ರೌಢ ಪ್ರಬಂಧÀಗಳನ್ನು ಮುದ್ರಿಸಿದ ಸಂಚಿಕೆಯನ್ನು ಅತಿಥಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಜ್ಞಾನ ಸಂಗಮ 2023ರ ಸಂಯೋಜಕರುಗಳಾದ ಪ್ರೊ.ರಜನಿ ರೈ ಸ್ವಾಗತಿಸಿ, ಪ್ರೊ.ಭಾರತಿ ವಂದಿಸಿದರು. ಉಪನ್ಯಾಸಕಿ ಪ್ರೊ.ಲತಾ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.