ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ – ಕಹಳೆ ನ್ಯೂಸ್
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ಧ ಬಲರಾಮ(67) ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.
ಬಲರಾಮ ಅನೆ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಬಲರಾಮ ಎಲ್ಲರ ಕಣ್ಮಣಿಯಾಗಿತ್ತು. ಅತ್ಯಂತ ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಿತ್ತು
ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಾ ಬಂದಿತ್ತು. ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ಧರಿಂದ ಆಹಾರ ಸೇವಿಸಲು ನೀರು ಕುಡಿಯಲು ಆಗದೇ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಬಲರಾಮ ಭಾನುವಾರ ಕೊನೆಯುಸಿರೆಳೆಯುತು.
ಭೀಮನಕಟ್ಟೆ ಶಿಬಿರದಲ್ಲಿದ್ದ ಬಲರಾಮ
ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಬಲರಾಮ ಆನೆಯ ಬಾಯಿಯಲ್ಲಿ ಹುಣ್ಣಾಗಿ ನಿತ್ರಾಣಗೊಂಡಿತ್ತು. ಹುಣ್ಣು ಉಲ್ಬಣಿಸಿ ಅಸ್ವಸ್ಥಗೊಂಡಿದ್ದ ಅದಕ್ಕೆ ಶಿಬಿರದಲ್ಲಿಯೇ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
ಆನೆಗೆ ಆಹಾರ ಸೇವಿಸಲು, ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿತ್ತು. ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಸ್ಥಳದಲ್ಲೇ ಠಿಕಾಣಿ ಹೂಡಿ ಚಿಕಿತ್ಸೆ ನೀಡುತ್ತಿದ್ದರು. ಜೊತೆಗೆ ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರತ್ನಾಕರ್, ಡಿಆರ್‌ಎಫ್‌ಒ ಸಿದ್ದರಾಜು ನೇತೃತ್ವದ ತಂಡ ಹಾಗೂ ಬಲರಾಮನ ಮಾವುತ ತಿಮ್ಮ, ಕಾವಾಡಿ ಮಂಜನಾಥ ಹಾಗೂ ಸಿಬ್ಬಂದಿ ಬಲರಾಮನ ಆರೈಕೆಯಲ್ಲಿತೊಡಗಿಸಿಕೊಂಡಿದ್ದರು.
ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು
ಎಷ್ಟೇ ಪ್ರಯತ್ನಪಟ್ಟರು ಸಹ ಚಿಕಿತ್ಸೆಗೆ ಸ್ಪಂದಿಸದ್ದರಿಂದ ಬಲರಾಮನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಬಲರಾಮನ ಅಗಲುವಿಕೆಯಿಂದ ಭೀಮನಕಟ್ಟೆ ಆನೆ ಶಿಬಿರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ದುಃಖತಪ್ತರಾಗಿದ್ದಾರೆ. ಇದು ಟಿಬಿ ಇರಬಹುದೆಂದು ಶಂಕಿಸಲಾಗಿದ್ದರೂ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಗುಂಡು ಹೊಡೆದಿದ್ದ ಜಮೀನು ಮಾಲೀಕ
ಬಲರಾಮ ಆನೆಗೆ ವ್ಯಕ್ತಿಯೊಬ್ಬ ಗುಂಡು ಹೊಡೆದ ಪ್ರಸಂಗ ಡಿಸೆಂಬರ್ 22ರಂದು ನಡೆದಿತ್ತು. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದ ಜಮೀನೊಂದಕ್ಕೆ ಬಲರಾಮ ಹೋಗಿದ್ದ. ಇದರಿಂದ ಕೋಪೋದ್ರಿಕ್ತನಾದ ಆ ಜಮೀನಿನ ಮಾಲೀಕ ಸುರೇಶ್ ಎಂಬಾತ ಮನಸೋ ಇಚ್ಛೆ ಬಲರಾಮನಿಗೆ ಗುಂಡು ಹಾರಿಸಿದ್ದ.
ಈ ವೇಳೆ ಗುಂಡು ಆನೆಯ ತೊಡೆ, ಕಾಲು ಸೇರಿದಂತೆ ದೇಹದ ಅರ್ಧ ಭಾಗಕ್ಕೆ ಹೊಕ್ಕಿ ಬಲರಾಮನಿಗೆ ತೀವ್ರ ಘಾಸಿಗೊಳಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಡಾ. ರಮೇಶ್ ಅವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಆದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು. ಗುಂಡು ಹಾರಿಸಿದ್ದ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಆತನಿಂದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.