ಮತದಾನಕ್ಕೆ ಉಡುಪಿ ಜಿಲ್ಲೆಯ ತಯಾರಿ ಪೂರ್ಣ ; ಅರ್ಹರೆಲ್ಲರೂ ಮತದಾನ ಮಾಡಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪತ್ರಿಕಾಗೋಷ್ಠಿ – ಕಹಳೆ ನ್ಯೂಸ್
ಉಡುಪಿ: ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 10,41,915 ಮಂದಿ ಮತದಾರರಿದ್ದು, ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಜಿಲ್ಲೆಯ 1111 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಅರ್ಹರೆಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮತದಾರರು ಚುನಾವಣಾ ಆಯೋಗ ನಮೂದಿಸಿದ ಯಾವುದಾದರೊಂದು ಗುರುತಿನ ದಾಖಲೆಯೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಬಹುದು. 5 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ ಒಟ್ಟು 25 ಸಖೀಮತಗಟ್ಟೆ, ತಲಾ 1ರಂತೆ 5 ಪಿಡಬ್ಲೂಡಿ, 5 ಯಂಗ್ ವೋಟರ್, 5 ಥೀಮ್ ಮತಗಟ್ಟೆ, ಹಾಗೂ ಕುಂದಾಪುರದ ಸೌಡದಲ್ಲಿ ಎಥಿ°ಕ್ ಮತಗಟ್ಟೆ, 227 ಕಡೆ ಕ್ರಿಟಿಕಲ್ ಮತಗಟ್ಟೆ ಮಾಡಲಾಗಿದೆ. ವಿಶೇಷ ಚೇತನ ಮತದಾರರಿಗಾಗಿ ಗಾಲಿಕುರ್ಚಿ, ಭೂತಕನ್ನಡಿ ಬ್ರೈಲ್ ಲಿಪಿಯ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್‍ಯಾಂಪ್‌ಗ್ಳ ವ್ಯವಸ್ಥೆಯನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗಿದೆ ಎಂದರು.
ವಾಹನ ವ್ಯವಸ್ಥೆ
ಚುನಾವಣೆ ಕರ್ತವ್ಯದಲ್ಲಿ ಭಾಗವಹಿಸುವ ಮತಗಟ್ಟೆ ಅಧಿಕಾರಿಗಳನ್ನು ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಹಾಗೂ ಮತದಾನ ಮುಗಿದ ಅನಂತರ ವಾಪಾಸು ಕರೆದುಕೊಂಡು ಬರಲು 176 ಬಸ್, 36 ಮಿನಿ ಬಸ್, 54 ಟೆಂಪೋ ಟ್ರಾವೆಲರ್, ಮ್ಯಾಕ್ಸಿಕ್ಯಾಬ್, ವ್ಯಾನ್, 68 ಜೀಪ್ ವ್ಯವಸ್ಥೆ ಮಾಡಲಾಗಿದೆ ಎಂದರು. ಮತದಾನ ದಿನದಂದು ರಾಜಕೀಯ ಪಕ್ಷದವರು ಮತದಾರರಿಗೆ ಯಾವುದೇ ವಾಹನ ವ್ಯವಸ್ಥೆ ಮಾಡಬಾರದು. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಜಿಲ್ಲಾಡಳಿತದಿಂದಲೇ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಈ ಬಗ್ಗೆ ಬಿಎಲ್‌ಓಗಳಿಗೆ ಮಾಹಿತಿ ನೀಡಿದರೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಇವಿಎಂ, ವಿವಿ ಪ್ಯಾಟ್/ ಮಸ್ಟರಿಂಗ್ ಡಿಮಸ್ಟರಿಂಗ್
ಚುನಾವಣೆಗೆ 1336 ಬ್ಯಾಲೆಟ್ ಯುನಿಟ್, 1336 ಕಂಟ್ರೋಲ್ ಯುನಿಟ್ ಹಾಗೂ 1446 ವಿವಿಪ್ಯಾಟ್ ವ್ಯವಸ್ಥೆ ಮಾಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ಪ.ಪೂ.ಕಾಲೇಜು, ಕುಂದಾಪುರದ ಭಂಡಾರ್‌ಕಾರ್ಸ್ ಆಟ್ಸ್ ಆಯಂಡ್ ಸೈನ್ಸ್ ಕಾಲೇಜು, ಉಡುಪಿಯ ಸೈಂಟ್ ಸಿಸಿಲಿ ಎಜುಕೇಶನ್ ಟ್ರಸ್ಟ್ ಬ್ರಹ್ಮಗಿರಿ, ಕಾಪುವಿನ ದಂಡತೀರ್ಥ ಪಿಯು ಕಾಲೇಜು ಉಳಿಯಾರಗೋಳಿ, ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ನಡೆಯಲಿದೆ ಎಂದರು.
ಹಲವು ದೂರು ಇತ್ಯರ್ಥ
ಮತದಾರರು ತಮ್ಮ ಮತಗಟ್ಟೆ ಸಂಖ್ಯೆ ಮತ್ತು ಕ್ರಮಸಂಖ್ಯೆಯನ್ನು NVಖಕ.ಜಿn ಹಾಗೂVಏಅ ಅಕಕ ಮೂಲಕ ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ ಮಾಹಿತಿ ಪಡೆಯಬಹುದು. C-VIGIL APPಮೂಲಕ 158 ಹಾಗೂ ಮತದಾರರ ಸಹಾಯವಾಣಿಗೆ 249, ಎನ್‌ಜಿಆರ್‌ಎಸ್ ಪೋರ್ಟಲ್ ಮೂಲಕ 120 ದೂರುಗಳು ಬಂದಿದ್ದು, ಎಲ್ಲ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಮಾದರಿ ನೀತಿಸಂಹಿತೆ ನಿರ್ವಹಣೆ ಬಗ್ಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಫ್‌ಎಸ್‌ಟಿ, ವಿಎಸ್‌ಟಿ, ಎಸ್‌ಎಸ್‌ಟಿ ತಂಡಗಳನ್ನು ನೇಮಕಾತಿ ಮಾಡಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಮದ್ಯ ಮಾರಾಟ ನಿಷೇಧ
ವಸತಿಗೃಹ, ಲಾಡ್ಜ್ ಧರ್ಮಶಾಲೆ, ಯಾತ್ರಿ ನಿವಾಸಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕೊನೆಯ 48 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಮತದಾರರಲ್ಲದವರು ಕ್ಷೇತ್ರಗಳಲ್ಲಿ ಉಳಿಯಬಾರದು. ಬಹಿರಂಗ ಪ್ರಚಾರ ಮೇ 8ರಂದು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಮೇ 8ರ ಸಂಜೆ 6ರಿಂದ ಮೇ 10ರಂದು ಮತದಾನ ಪೂರ್ಣಗೊಳ್ಳುವವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮೇ 10ರಂದು ಬೆಳಗ್ಗೆ 6ರಿಂದ ಮತದಾನ ಮುಕ್ತಾಯವಾಗುವವರೆಗೆ ಸಂತೆ, ಜಾತ್ರೆ, ಪೂರ್ವಾನುಮತಿ ಪಡೆಯದೆ ಉತ್ಸವ ನಡೆಸುವುದನ್ನು ನಿಷೇಧಿಸಲಾಗಿದೆ. ಮೇ 8ರಂದು ಸಂಜೆ 5ರಿಂದ ಮೇ 13ರಂದು ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಮೇ 8ರಂದು ಸಂಜೆ 6ರಿಂದ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಎಲ್ಲ ಪ್ರಚಾರ ವಾಹನಗಳಿಗೆ ನೀಡಲಾದ ಅನುಮತಿ ಮೇ 8ರಂದು ಸಂಜೆ 6ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.
ಜಿ.ಪಂ.ಸಿಇಓ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಪೊಲೀಸ್ ಸನ್ನದ್ಧ
19 ಅರೆಸೇನಾ ಪಡೆ ನಿಯೋಜಿಸಲಾಗಿದೆ. ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದಲೂ ಶಸ್ತ್ರಸಜ್ಜಿತ ಫೋರ್ಸ್ ಬಂದಿದೆ. 90 ಕಡೆ ರೂಟ್ ಮಾರ್ಚ್ ನಡೆಸಲಾಗಿದೆ. 741 ಪ್ರಕರಣದಲ್ಲಿ 850 ಕ್ಕೂ ಅಧಿಕ ಮಂದಿಯಿಂದ ಬಾಂಡಿಂಗ್ ಮಾಡಿಸಿದ್ದು, ಇದರಲ್ಲಿ ತಪ್ಪು ಮಾಡಿದ 7 ಜನರಿಂದ 7 ಲ.ರೂ.ದಂಡ ವಸೂಲಿ ಮಾಡಲಾಗಿದೆ. 13 ಜನರನ್ನು ಗಡಿಪಾರು ಮಾಡಲಾಗಿದೆ. 2 ಮಂದಿಯನ್ನು ಗುಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಪರವಾನಿಗೆ ಹೊಂದಿದ 3,300 ಆಯುಧಗಳಲ್ಲಿ 27 ಹೊರತುಪಡಿಸಿ ಉಳಿದ ಎಲ್ಲವನ್ನೂ ಠೇವಣಿ ಮಾಡಲಾಗಿದೆ. ಜಿÇÉೆಯಲ್ಲಿ ನಡೆದ ಎಲ್ಲ ಪ್ರಚಾರ ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಮತದಾನ ದಿನದಂದು 73 ವಿಶೇಷ ಸೆಕ್ಟರ್‌ಗಳ ಮೂಲಕ ಎಲ್ಲ ಮತಗಟ್ಟೆಗಳ ಮೇಲೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ತಿಳಿಸಿದರು.