ಮೇ 10ರ ಮತದಾನದಂದು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ನಿರ್ಬಂಧ ; ಮತ ಹಾಕಿದವರಿಗೆ ಮಾತ್ರ ವಾಹನದಲ್ಲಿ ಪರ್ಮಿಷನ್ – ಕಹಳೆ ನ್ಯೂಸ್
ಮೈಸೂರು ಪ್ರವಾಸಿಗರ ಸ್ವರ್ಗ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಮೈಸೂರು ಟ್ರ್ಯಾವಲ್ಸ್ ಮಾಲೀಕರು ಕಡ್ಡಾಯ ಮತದಾನಕ್ಕೆ ಸಾಥ್ ನೀಡಿದ್ದು ಮತದಾನದ ದಿನದಂದು ಮತ ಚಲಾಯಿಸಿದವರಿಗೆ ಮಾತ್ರ ಪ್ರವಾಸಿ ವಾಹನದಲ್ಲಿ ಪ್ರಯಾಣಿಸಲು ಅಥವಾ ಬಳಸಲು ಅವಕಾಶ ನೀಡಲು ಮುಂದಾಗಿದ್ದಾರೆ. ಇದು ನಾಳೆ ಮೈಸೂರು ಪ್ರವಾಸಿ ತಾಣಗಳಿಗೆ ಬರುವ ನಮ್ಮ ರಾಜ್ಯದ ಪ್ರವಾಸಿಗರಿಗೆ ಅನ್ವಯವಾಗುತ್ತದೆ.
ಮತದಾನ ಮಾಡಿದ ಗುರುತು ತೋರಿಸಿದರೆ ಮಾತ್ರ ವಾಹನ ನೀಡಲಾಗುತ್ತೆ. ಇಲ್ಲವಾದರೆ ವಾಹನ ನೀಡವುದಿಲ್ಲ. ಮತದಾನ ಪ್ರಜಾಪ್ರಭುತ್ವದ ಹಬ್ಬ ಎಲ್ಲರೂ ಅದರಲ್ಲಿ ಭಾಗವಹಿಸಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಬಹುತೇಕರು ಮತದಾನದ ದಿನದ ರಜೆಯಲ್ಲಿ ಪ್ರವಾಸ ಹೋಗುತ್ತಾರೆ. ಮೈಸೂರು ಪ್ರವಾಸಿಗರ ಸ್ವರ್ಗ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅದಕ್ಕಾಗಿ ಈಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಮತದಾನ ಯಶಸ್ವಿಗೊಳಿಸಲು ನಮ್ಮ ಸಹಕಾರ ಎಂದು ಟಿವಿ9ಗೆ ಮೈಸೂರು ಟ್ರ್ಯಾವಲ್ಸ್ ಮಾಲೀಕ ಜಯಕುಮಾರ್ ತಿಳಿಸಿದರು.
ನಾಳೆ ಬನ್ನೇರುಘಟ್ಟ ಪಾರ್ಕ್ ಬಂದ್
ಬೆಂ ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ನಾಳೆ ಮತದಾನ ದಿನವಾದ ಹಿನ್ನೆಲೆ ಬಂದ್ ಮಾಡಲಾಗುತ್ತೆ. ಈ ಬಗ್ಗೆ ಟಿವಿ9ಗೆ ED ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಮತದಾನದ ಕಾರಣ ಪಾರ್ಕ್ ಬಂದ್ ಮಾಡಲಾಗುತ್ತೆ ಎಂದರು.
ಮತದಾನದಂದು ನಂದಿಗಿರಿಧಾಮ ಬಂದ್
ನಾಳೆ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮೇ 10ರ ಮುಂಜಾನೆ 5ರಿಂದ ರಾತ್ರಿ 8 ಗಂಟೆವರೆಗೆ ನಂದಿಗಿರಿಧಾಮ ಬಂದ್ ಮಾಡಿ ಚಿಕ್ಕಬಳ್ಳಾಪುರ ಡಿಸಿ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಮೇ 10ರಂದು ಜೋಗಜಲಪಾತಕ್ಕೆ ನಿರ್ಬಂಧ
ಮೇ 10ಅಂದ್ರೆ ನಾಳೆ ಮತದಾನ ಇರುವುದರಿಂದ ಅಂದು ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧ ಇದೆ. ಮತದಾನ ದಿನದಂದು ಬಹಳಷ್ಟುಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವುದನ್ನು ಬಿಟ್ಟು ರಜಾ ಮಜಾ ಸವಿಯಲು ಪ್ರವಾಸಿ ತಾಣಗಳಿಗೆ ಹೋಗುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಇದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಚುನಾವಣೆ ದಿನದಂದು ಜೋಗ ಜಲಪಾತ ವೀಕ್ಷಣೆಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನಿರ್ಬಂಧ ವಿಧಿಸಿದ್ದಾರೆ.
ಮತದಾನದಿಂದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರದೆ ಇದ್ದರೆ ಬರುವ ಪ್ರವಾಸಿಗರಿಗಾಗಿ ನಿರ್ವಹಣಾ ಪ್ರಾಧಿಕಾರ ಸಿಬ್ಬಂದಿ ಕರ್ತವ್ಯಪಾಲನೆ ಮಾಡಬೇಕಾಗುತ್ತದೆ. ಇವರಿಗೆ ಪೂರಕವಾಗಿ ಸ್ಥಳೀಯವಾಗಿರುವ ವ್ಯಾಪಾರಸ್ಥರು, ಛಾಯಚಿತ್ರಗಾರರು, ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೋಚಾಲಕರು, ಟ್ಯಾಕ್ಸಿ ಚಾಲಕರು ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಮತದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಹಿಂದೆ ಮತದಾನ ದಿನಗಳಂದು ಜೋಗ ನಿರ್ವಹಣಾ ಪ್ರಾಧಿಕಾರದಲ್ಲಿ ದಾಖಲಾದ ಪ್ರವಾಸಿಗರ ಸಂಖ್ಯೆ ಅಂಕಿ ಅಂಶಗಳನ್ನು ಪರಿಗಣಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.