ಹೊಳೆಯಲ್ಲಿ ಮುಳುಗಿ ಸಹೋದರಿಯರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಪ ಸಮೀಪದ ಕೇನ್ಯದ ಕನ್ಕಲ್ ಕುಮಾರಧಾರಾ ನದಿಯ ಪೆಲತಗುಂಡಿಯಲ್ಲಿ ಸಂಭವಿಸಿದೆ.
ಮೂಲತಃ ಬಳ್ಪದ ಕನ್ಕಲ್ ನವರಾದ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಹಾಗೂ ಆವಂತಿಕಾ (11) ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಮಕ್ಕಳು.
ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹ ಪತ್ತೆ ಹಚ್ಚಿ ನದಿಯಿಂದ ಹೊರ ತೆಗೆಯಲಾಯಿತು.
ಕೇನ್ಯ ಉದಯ ಅಮ್ಮಣ್ಣಾಯ ಅವರ ಸಹೋದರ ಸತೀಶ್ ಅಮ್ಮಣ್ಣಾಯ ಅವರು ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದು, ಅಲ್ಲೇ ವಾಸ್ತವ್ಯವಿದ್ದರು. ಅವರ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ತಾಯಿಯೊಂದಿಗೆ ಸೋಮವಾರ ತನ್ನೂರಾದ ಬಳ್ಪದ ಕನ್ಕಲ್ ಗೆ ಬಂದಿದ್ದರು.
ಸೋಮವಾರ ಬೆಳಗ್ಗೆ ಉದಯ ಅಮ್ಮಣ್ಣಾಯ ಅವರ ಮನೆಗೆ ಬಂದಿದ್ದ ಹೆಣ್ಣು ಮಕ್ಕಳು ಸಂಜೆ ವೇಳೆಗೆ ಮನೆ ಮಂದಿಯ ಜತೆಗೆ ಮನೆ ಸಮೀಪವೇ ಇರುವ ಕುಮಾರಧಾರಾ ನದಿ ಬಳಿಗೆ ತೆರಳಿದ್ದರು. ಮನೆಯವರು ನದಿ ಸಮೀಪವೇ ಇದ್ದಿದ್ದು, ಹೆಣ್ಣು ಮಕ್ಕಳು ನದಿಗೆ ಇಳಿದವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಮಂಗಳವಾರ ಕನ್ಕಲ್ ನಲ್ಲಿ ಕಾರ್ಯಕ್ರಮವೊಂದಿತ್ತು. ಇದಕ್ಕೆ ಅವರು ಬೆಂಗಳೂರಿನಿAದ ಬಂದಿದ್ದರು ಎಂದು ತಿಳಿದುಬಂದಿದೆ. ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಹಾಗೂ ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.
ಮಕ್ಕಳು ನಾಪತ್ತೆಯಾಗಿರುವುದು ತಿಳಿಯುತ್ತಲೇ ಮನೆಮಂದಿ ಹುಡುಕಾಟ ಆರಂಭಿಸಿದ್ದಾರೆ. ಸುಳ್ಯದಿಂದ ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಗಿತ್ತು. ಸ್ಥಳೀಯ ಈಜುಗಾರರೂ ನದಿ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದ್ದರು. ನದಿಯಲ್ಲಿ ತೀವ್ರ ಹುಡುಕಾಟದ ಬಳಿಕ ರಾತ್ರಿ ವೇಳೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ. ನದಿಯ ಆಳ ತಿಳಿಯದೇ ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.