ಪ್ರತಿಯೊಂದು ಮತ ಎಣಿಕಾ ಕೇಂದ್ರಗಳಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನ ಮಾಡಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್‌ಕುಮಾರ್ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ಜೊತೆಗೆ 87 ಕಂಪೆನಿ ಅರೆಸೇನಾ ಪಡೆಗಳನ್ನು ಮತ ಎಣಿಕಾ ಕೇಂದ್ರಗಳ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ. ಪ್ರತಿಯೊಂದು ಮತ ಎಣಿಕಾ ಕೇಂದ್ರಗಳಲ್ಲೂ ಒಂದು ಪಾಳಿಯಲ್ಲಿ ಒಬ್ಬರು ಇನ್ಸ್ಪೆಕ್ಟರ್ ಉಸ್ತುವಾರಿಯಲ್ಲಿರುತ್ತಾರೆ. ಇದೇ ರೀತಿ ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಸಬ್ ಇನ್ಸ್ಪೆಕ್ಟರ್‌ಗಳು, ಎಎಸ್‌ಐ, ಹೆಡ್‌ಕಾನ್ಸ್ಟೇಬಲ್ ಇರುತ್ತಾರೆ.
ಒಂದು ಮತ ಎಣಿಕಾ ಕೇಂದ್ರಕ್ಕೆ ಒಂದು ಪ್ಲಟೂನ್ ಅರೆಸೇನಾ, ಎರಡು ಪ್ಲಟೂನ್ ಕೆಎಸ್‌ಆರ್‌ಪಿ, ಎರಡು ಪ್ಲಟೂನ್ ಡಿಎಆರ್ ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರ ಜೊತೆಗೆ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಆರಂಭವಾಗುವವರೆಗೂ ಮತ ಎಣಿಕಾ ಕೇಂದ್ರಗಳ ಬಳಿ ಯಾರೂ ಬರದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ 10.15ರವರೆಗೂ ಮತದಾನ ಪ್ರಕ್ರಿಯೆ ನಡೆದಿದ್ದು,ರಾತ್ರಿ 11 ಗಂಟೆಗೆ ಎಲ್ಲಾ ಮತಯಂತ್ರಗಳನ್ನು ಮತ ಎಣಿಕಾ ಕೇಂದ್ರಗಳಿಗೆ ತಲುಪಿಸಿ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ತಮ್ಮ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮತ್ತೆ ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ನಿಷ್ಠೆ ತೋರಿರುವ ಅವರಿಗೆ ಇದೇ ವೇಳೆ ಅಲೋಕ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಿಬ್ಬಂದಿಯ ಕೆಲಸದ ಬದ್ಧತೆಗೆ ಕರ್ನಾಟಕದ ಡಿಜಿ-ಐಜಿಪಿ ಪ್ರವೀಣ್ ಸೂದ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಾರ್ವಜನಿಕರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.