Monday, January 20, 2025
ಉಡುಪಿಸುದ್ದಿ

ಭಾರೀ ಗಾಳಿ ಮಳೆ : ರಿಕ್ಷಾದ ಮೇಲೆ ಬಿದ್ದ ಬೃಹತ್ ಮರ : ಇಬ್ಬರು ಸಾವು –ಕಹಳೆ ನ್ಯೂಸ್

ಭಾರೀ ಗಾಳಿ ಮಳೆಯ ಪರಿಣಾಮ ಉಡುಪಿ ಜಿಲ್ಲೆಯ ಕಾಪು – ಶಿರ್ವ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮಲ್ಲಾರು ಚಂದ್ರನಗರದ ಬಳಿ ಅವಘಡ ಸಂಭವಿಸಿದ್ದು, ಕಾಪುವಿನಿಂದ ಪಾದೂರಿಗೆ ತೆರಳುತಿದ್ದ ರಿಕ್ಷಾದ ಮೇಲೆ ಧೂಪದ ಮರ ಉರುಳಿ ಬಿದ್ದಿದ್ದು ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾದೂರು ಕೂರಾಲು ರೈಸ್ ಮಿಲ್ ಬಳಿಯ ನಿವಾಸಿ ೪೫ ವರ್ಷದ ಪುಷ್ಪಾ ಕುಲಾಲ್ ಮತ್ತು ಕಳತ್ತೂರು ನಿವಾಸಿ ೪೮ವರ್ಷದ ಕೃಷ್ಣ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಿಕ್ಷಾ ಚಾಲಕ ಶರೀಫ್ ಅವರು ಪವಾಡ ಸದೃಶ ರೀತಿಯಲ್ಲಿ ರಿಕ್ಷಾದಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮರವನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.
ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಸಹಕಾರ ಹಾಗು ಜೆಸಿಬಿ, ಕ್ರೇನ್ ಸಹಾಯದಿಂದ ಸತತ ಒಂದೂವರೆ ಗಂಟೆಗಳ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು.

ರಿಕ್ಷಾದೊಳಗೆ ಸಿಲುಕಿದ್ದವರು ಅಷ್ಟರಲ್ಲೇ ಮೃತ ಪಟ್ಟಿದ್ದರು. ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತು.

ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಯಿತು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.