Friday, September 20, 2024
ಕ್ರೀಡೆಸುದ್ದಿ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಟೈನಲ್ಲಿ ಅಂತ್ಯ – ಕಹಳೆ ನ್ಯೂಸ್

ನವದೆಹಲಿ: ಏಷ್ಯಾಕಪ್ ಸೂಪರ್ 4 ಹಂತದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಆದರೆ ಅದ್ಬುತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ಚಾಂಪಿಯನ್ ಆಟ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಏಷ್ಯಾ ಕಪ್ ಟೂರ್ನಿಯುದ್ದಕ್ಕೂ ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ಚಳಿ ಹುಟ್ಟಿಸಿದ್ದ ಈಗ ತಾನೇ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ಅಫ್ಘಾನ್ ತಂಡವು ನಿನ್ನೆ ನಡೆದ ‘ಸೂಪರ್ 4 ಹಂತದ ಪಂದ್ಯದಲ್ಲಿ ಭಾರತಕ್ಕೆ ಶಾಕ್ ನೀಡಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದುಬೈನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ನಿನ್ನೆ ಭಾರತ ಮತ್ತು ಅಫ್ಘಾನಿಸ್ಥಾನದ ನಡುವೆ ಪಂದ್ಯ ಏರ್ಪಟ್ಟಿತು. ಈ ಪಂದ್ಯವು ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿತ್ತು. ಎಲ್ಲರ ನೀರೀಕ್ಷೆಗಳನ್ನು ಹುಸಿ ಮಾಡಿದ ಟೀಮ್ ಇಂಡಿಯಾ ಕೊನೆಯ ಎಸೆತದಲ್ಲಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿಬಿಟ್ಟಿತು. ಈ ಮೂಲಕ ನಿನ್ನೆ ನಡೆದ ಪಂದ್ಯ ಏಷ್ಯಾ ಕಪ್ ಟೂರ್ನಿಯ ಸ್ಮರಣೀಯ ಪಂದ್ಯವಾಗಿ ಇತಿಹಾಸದ ಪುಟದಲ್ಲಿ ಉಳಿದಿದೆ.

ಜಾಹೀರಾತು

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಅಫ್ಘಾನ್ ಭಾರತಕ್ಕೆ 252 ರನ್ ಗುರಿ ನೀಡಿತ್ತು. ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ಭಾರತವು ಇನ್ನೂ 1 ಎಸೆತ ಬಾಕಿಯಿದ್ದಂತೆ 252 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಜಯದ ಹೊಸ್ತಿಲಲ್ಲಿ ಎಡವಿತು. ರವೀಂದ್ರ ಜಡೇಜಾ ಅವರು ಅಂತಿಮ ವಿಕೆಟ್ ರೂಪದಲ್ಲಿ ಔಟಾಗುತ್ತಿದ್ದಂತೆಯೇ ಅಫ್ಘಾನ್ ಆಟಗಾರರು ಮೈದಾನದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಇತ್ತ ಭಾರತದ ಅಭಿಮಾನಿಗಳು ನಿರಾಸೆಯಲ್ಲಿ ಮುಳುಗಿದರು.

ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತಕ್ಕೆ ಹಾಗೂ ಕೂಟದಿಂದ ಹೊರಬಿದ್ದಿದ್ದ ಅಫ್ಘಾನಿಸ್ಥಾನಕ್ಕೆ ಈ ಪಂದ್ಯ ಯಾವುದೇ ರೀತಿಯಲ್ಲಿ ಮಹತ್ವದಲ್ಲವಾಗಿದ್ದರೂ ಕ್ರಿಕೆಟ್ ಶಿಶು ಅಫ್ಘಾನಿಸ್ಥಾನಕ್ಕೆ ಈ ಚೇತೋಹಾರಿ ಪ್ರದರ್ಶನ ಅದ್ಭುತವಾದ ನೈತಿಕ ಬಲವನ್ನು ತುಂಬಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಆಫ್ಘಾನಿಸ್ತಾನ ನೀಡಿದ ೨೫೩ ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಕೆ ಎಲ್ ರಾಹುಲ್ ಹಾಗೂ ಅಂಬಾಟಿ ರಾಯುಡು ಡೀಸೆಂಟ್ ಒಪನಿಂಗ್ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 110 ರನ್ ಜೊತೆಯಾಟ ನೀಡಿದರು. ಕೆ ಎಲ್ ರಾಹುಲ್ ಹಾಗೂ ಅಂಬಾಟಿ ರಾಯುಡು ಅರ್ಧಶತಕ ಸಿಡಿಸಿ ಮಿಂಚಿದರು. ರಾಯುಡು 57 ರನ್ ಸಿಡಿಸಿ ಔಟಾದರೆ, ರಾಹುಲ್ 60 ರನ್ ಸಿಡಿಸಿ ನಿರ್ಗಮಿಸಿದರು. ನಾಯಕನಾಗಿ ಮತ್ತೆ ಕಣಕ್ಕಿಳಿದ ಎಂ.ಎಸ್ ಧೋನಿ ಕೇವಲ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು.
ಸೂಪರ್ 4 ಹಂತದ ಅಂತಿಮ ಪಂದ್ಯದಲ್ಲಿ ಅವಕಾಶ ಪಡೆದ ಮನೀಶ್ ಪಾಂಡೆ ನಿರಾಸೆ ಮೂಡಿಸಿದರು.

ಪಾಂಡೆ 8 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ದಿನೇಶ್ ಕಾರ್ತಿಕ್ ಹಾಗೂ ಕೇದಾರ್ ಜಾದವ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಜಾದವ್ 19 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ದಿನೇಶ್ ಕಾರ್ತಿಕ್ 44 ರನ್ ಸಿಡಿಸಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಜವಾಬ್ದಾರಿಯುತ ಜೊತೆಯಾಟ ನೀಡಿದರು.

ಅಂತಿಮ 12 ಎಸೆತದಲ್ಲಿ ಭಾರತದ ಗೆಲುವಿಗೆ 13 ರನ್ ಅವಶ್ಯಕತೆ ಇತ್ತು. 9 ರನ್ ಸಿಡಿಸಿದ ಕುಲ್ದೀಪ್ ರನೌಟ್‌ಗೆ ಬಲಿಯಾದರೆ, ಸಿದ್ಧಾರ್ಥ್ ಕೌಲ್ ಶೂನ್ಯ ಸುತ್ತಿದರು. ಆತಂಕಕ್ಕೆ ಸಿಲುಕಿದ ಟೀಂ ಇಂಡಿಯಾಗೆ ಜಡೇಜಾ ಬೌಂಡರಿ ಸಿಡಿಸೋ ಮೂಲಕ ಒತ್ತಡ ಕಡಿಮೆ ಮಾಡಿದರು. ಗೆಲುವಿಗೆ ಇನ್ನೊಂದು ರನ್ ಬಾಕಿ ಇರುವಂತೆ ಜಡೇಜಾ ಔಟಾದರು. ಈ ಮೂಲಕ ಭಾರತ 252 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.