ಸುಳ್ಯ ತಾಲೂಕಿನ ಅಜ್ಜಾವರದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಕಾರ್ಯಾಚರಣೆಯ ಅನಂತರ ಕಾಡಾನೆ ಹಿಂಡಿನಿAದ ಬೇರ್ಪಟ್ಟಿದ್ದರಿಂದ ದುಬಾರೆಯ ಆನೆ ಶಿಬಿರಕ್ಕೆ ಕಳುಹಿಸಲ್ಪಟ್ಟಿದ್ದ ಮರಿಯಾನೆ ಅಲ್ಲಿ ವಾರದ ಹಿಂದೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಎ. 13ರಂದು ನಾಲ್ಕು ಆನೆಗಳು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ತೋಟದ ಕೆರೆಗೆ ಬಿದ್ದಿದ್ದವು. ಜನರು ಕೆರೆಯ ದಡ ಅಗೆದು ಆನೆಗಳು ಮೇಲೆ ಹತ್ತುವಂತೆ ಮಾಡಿದ ಬಳಿಕ ಮೂರು ಆನೆಗಳು ಸುಲಭದಲ್ಲಿ ಮೇಲೆ ಬಂದಿದ್ದವು. ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ ಮೇಲಕ್ಕೆ ಹತ್ತಿಸಿದ್ದರು. ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ. ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ಮರಿಯಾನೆ ವಾಪಸ್ ಬಂದಿತ್ತು. ಬಳಿಕ ಆನೆ ತಜ್ಞರ ಅಭಿಪ್ರಾಯದ ಮೇರೆಗೆ ದುಬಾರೆ ಆನೆ ಶಿಬಿರದಿಂದ ತಜ್ಞರು ಬಂದು ಎ.16 ರಂದು ದುಬಾರೆ ಆನೆ ಶಿಬಿರಕ್ಕೆ ಅದನ್ನು ಕರೆದೊಯ್ದಿದ್ದರು.
ಶಿಬಿರದಲ್ಲಿ ಈ ಮರಿಯಾನೆ ಚುರುಕಾಗಿದ್ದು ಹಾಲು ಸೇವಿಸುತ್ತಿತ್ತು. ಇತರ ಆನೆ ಮರಿಗಳೊಂದಿಗೆ ಕೂಡಿ ಆಟವಾಡುತ್ತಿತ್ತೆನ್ನಲಾಗಿದೆ. ಆದರೆ ವಾರದ ಹಿಂದೆ ದಿಢೀರನೆ ಆನೆ ಮರಿ ಸಾವನ್ನಪ್ಪಿದೆ. ಈ ದಿಢೀರ್ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.