Recent Posts

Monday, January 20, 2025
ಸುದ್ದಿ

ಝೋನಲ್ ರೆಗ್ಯುಲೇಶನ್ ಜಾರಿಗೊಳಿಸಿ ಮನೆ ನಿರ್ಮಾಣಕ್ಕೆ ಶೀಘ್ರ ಪರವಾನಿಗೆ: ಉಮಾನಾಥ ಕೋಟ್ಯಾನ್ – ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ಮುಡಾ ಝೋನಲ್ ರೆಗ್ಯುಲೇಶನ್ ಅನ್ವಯಿಸಲು ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು ಅವಕಾಶ ಕಲ್ಪಿಸಿ ಪರವಾನಿಗೆ ಪಡೆಯಲು ನಿಯಮಗಳನ್ನು ಸರಳಗೊಳಿಸಲಾಗಿದ್ದು, ಇನ್ನು ಮುಂದೆ ಮೂಡುಬಿದಿರೆಯಲ್ಲಿ ಮನೆ ನಿರ್ಮಾಣಕ್ಕೆ ಶೀಘ್ರ ಪರವಾನಿಗೆ ಲಭ್ಯವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

ಅವರು ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಬಿಗಿ ನಿಯಮಾವಳಿಗಳಿಂದಾಗಿ ಬಡವರಿಗೆ ಮನೆ ಕಟ್ಟಲು ಪರವಾನಿಗೆ ದೊರೆಯದೆ ಬಹಳ ಸಮಸ್ಯೆಯಾಗುತ್ತಿರುವುದನ್ನು ಮನಗಂಡು, ಈ ಸಮಸ್ಯೆಯ ಬಗ್ಗೆ ಕಳೆದ ಎರಡು ತಿಂಗಳಿಂದ ಸತತ ಪ್ರಯತ್ನ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಮೂಡುಬಿದಿರೆ ಪುರಸಭೆಯಲ್ಲಿ ಕಳೆದ 4 ವರ್ಷಗಳಿಂದ ಮನೆ ಕಟ್ಟಲು ಪರವಾನಿಗೆ ನೀಡದೆ, ಯಾವುದೇ ಕನ್ವರ್ಷನ್ ಸೈಟುಗಳಿಗೆ ಖಾತೆ ನೀಡದೆ ಜನರಿಗೆ ಬಹಳ ತೊಂದರೆಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುರಸಭೆಗೆ ಒಂದು ಕೋಟಿಗೂ ಮಿಕ್ಕಿ ನಷ್ಟವುಂಟಾಗಿತ್ತು. ನೋಂದಣಿ ಕಚೇರಿಯಲ್ಲಿ ವಹಿವಾಟು ನಡೆಯದೆ, ಸರಕಾರದ ಖಜಾನೆಗೂ ಲಕ್ಷಾಂತರ ರೂ. ನಷ್ಟವುಂಟಾಗಿತ್ತು. ಕಟ್ಟಡ ನಿರ್ಮಾಣ ಕಾಮಗಾರಿಗಳೆಲ್ಲ ಬಿದ್ದು ಹೋಗಿ ಗುತ್ತಿಗೆದಾರರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ತಾನು ಸೆ. 19ರಂದು ಬೆಂಗಳೂರಿನಲ್ಲಿ ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು, ದ.ಕ. ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಇರುವ ಅಧಿಕಾರಿ ಪೊನ್ನುರಾಜ್ ಇವರಿಗೆ ಮನವರಿಕೆ ಮಾಡಿದಾಗ ಅವರು ಸಮಸ್ಯೆಯ ಮೂಲವನ್ನು ತಿಳಿದುಕೊಂಡರು.

ಕೂಡಲೇ ದ.ಕ. ಜಿಲ್ಲಾಧಿಕಾರಿ ಮತ್ತು ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಮುಖ್ಯಸ್ಥರಾದ ಸಹಾಯಕ ಆಯುಕ್ತರು ಹಾಗೂ ಕಾರ್ಯದರ್ಶಿಯವರಿಗೆ ಇದುವರೆಗೆ ಮೂಡಬಿದಿರೆಯಲ್ಲಿ ಅನುಸರಿಸಲಾಗುತ್ತಿರುವ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನಿಯಮಾವಳಿಗಳ ಬದಲಾಗಿ ಮಂಗಳೂರು ಮುಡಾ ಅಳವಡಿಸಿರುವ ಝೋನಲ್ ರೆಗ್ಯುಲೇಶನ್ ಜಾರಿಗೊಳಿಸಿ, ಮನೆ ಕಟ್ಟಬಯಸುವವರಿಗೆ ಪರವಾನಿಗೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಈ ಬಗ್ಗೆ ಈಗಾಗಲೇ ಮೂಡಬಿದಿರೆ ಪುರಸಭೆಗೂ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.