ಬೆಂಗಳೂರು: ರಾಜ್ಯಸರ್ಕಾರವು ಮಹಿಳೆಯರಿಗಾಗಿ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯನ್ನು ಆರಂಭಿಸುತ್ತಿದ್ದು, ಯೋಜನೆ ನವೆಂಬರ್ 1 ರಿಂದ ಅನುಷ್ಠಾನಗೊಳ್ಳಲಿದೆ.
ರಾಜ್ಯದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನವೆಂಬರ್ 1 ರಿಂದ ಮಾಸಿಕ ಒಂದು ಸಾವಿರ ರೂ.ಗಳಂತೆ ಹೆರಿಗೆ ಪೂರ್ವ ಹಾಗೂ ಹೆರಿಗೆ ನಂತರ ತಲಾ ಮೂರು ತಿಂಗಳಿನಿಂದ ಆರು ತಿಂಗಳ ಕಾಲ 6 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಗರ್ಭಿಣಿಯರು, ಬಾಣಂತಿಯರಲ್ಲಿ ಕಂಡು ಬರುವ ಸಹಜ ಸಮಸ್ಯೆಗಳೆಂದರೆ ವಿವಿಧ ಹಂತದ ಶಿಶುಗಳಲ್ಲಿ ಕಂಡುಬರುವ ಕುಂಠಿತ ಬೆಳವಣಿಗೆ, ತೂಕದ ಕೊರತೆ, ತೀವ್ರ ಅಪೌಷ್ಠಿಕತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಜನನ ಹೀಗೆ ಎಲ್ಲ ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು ಇದರ ಫಲವಾಗಿ ಅದೆಷ್ಟೋ ರೈತ ಹಾಗೂ ಕಾರ್ಮಿಕ ಮಹಿಳೆಯರು ಇಂದು ಮಾತೃಪೂರ್ಣ ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ.
ಅದರಂತೆಯೇ ಈಗ ಸರ್ಕಾರವು ರಾಜ್ಯದ ಶೇ.46 ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಅರಿತು, ಇದನ್ನು ನೀಗಿಸಲು ಪೋಷಣೆ ಅಭಿಯಾನ-ಪೌಷ್ಠಿಕ ಕರ್ನಾಟಕ ಯೋಜನೆಗೆ ಸರ್ಕಾರ ಚಾಲನೆ ನೀಡಿತು.
ಶಿಶು ಸುರಕ್ಷಣಾ, ಸೃಷ್ಠಿ ಯೋಜನೆ ಬಗ್ಗೆ ಜಾಗೃತಿ ಬೇಕು ಪೌಷ್ಠಿಕ ಕರ್ನಾಟಕ ಪೋಷಣೆ ಅಭಿಯಾನದಡಿ ಮಾತೃಪೂರ್ಣ, ಮಾತೃಶ್ರೀ, ಸೃಷ್ಠಿ ಯೋಜನೆ, ಕ್ಷೀರಭಾಗ್ಯ, ಜನನಿ ಸುರಕ್ಷಾ ಯೋಜನೆ ಹಾಗೂ ಜನನಿ ಶಿಶು ಸುರಕ್ಷಾ ಯೋಜನೆ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಅರ್ಹ ಲಾನುಭವಿಗಳಿಗೆ ಎಲ್ಲ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದರು.