ಇಸ್ಲಾಮಾಬಾದ್: ಪಾಕಿಸ್ತಾನ ದುರಂತ ಅವಸಾನದತ್ತ ಸಾಗುತ್ತಿದೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ದೇಶ ಇಬ್ಭಾಗವಾಗುವ ಸನಿಹದಲ್ಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಆಡಳಿತಾರೂಢ ಸರ್ಕಾರದ ಕಾರ್ಯವೈಖರಿ ಖಂಡಿಸಿ ಇಮ್ರಾನ್ ಖಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಪಾಕ್ ಸರ್ಕಾರ ತನ್ನ ಪಕ್ಷದ ಬೆಂಬಲಿಗರ ವಿರುದ್ಧ ಸೇನೆಯನ್ನು ಎತ್ತಿಕಟ್ಟಿದ್ದು, ಪಿಟಿಐ ಪಕ್ಷವನ್ನು ಮುಗಿಸಲು ಸಂಚು ಹೂಡಿರುವುದಾಗಿ ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದ್ದು, ರಾಜಕೀಯ ಅಸ್ಥಿರತೆ ದೇಶವನ್ನು ಅಪಾಯದ ಕೂಪಕ್ಕೆ ತಳ್ಳಿದೆ. ಇದನ್ನು ತಪ್ಪಿಸಲು ಚುನಾವಣೆ ನಡೆಸಿ ರಾಜಕೀಯ ಅತಂತ್ರ ಸ್ಥಿತಿಯನ್ನು ಹೋಗಲಾಡಿಸದಿದ್ದರೆ, ಪಾಕ್ ವಿಭಜನೆಯ ಹಾದಿ ಹಿಡಿಯಲಿದೆ. ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಹುಟ್ಟಿಕೊಂಡಂತೆ ಮತ್ತೊಂದು ಪಾಕಿಸ್ತಾನ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.