ಜನವರಿಯಲ್ಲೇ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಭವ್ಯ ಸಮಾರಂಭಕ್ಕೆ ಸಾರ್ವಜನಿಕರನ್ನು ಆಹ್ವಾನಿಸಿದ ಸಿಎಂ ಯೋಗಿ ಆದಿತ್ಯನಾಥ್ – ಕಹಳೆ ನ್ಯೂಸ್
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಕಾರಣ ಸದ್ಯದಲ್ಲೇ ಬಹುನಿರೀಕ್ಷಿತ ರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆ ಸಾಕ್ಷಿಯಾಗಲಿದೆ. ನಗರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ವಿಸ್ತರಣೆ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೂ ಶೀಘ್ರದಲ್ಲಿ ಮುಗಿಸುವಂತೆ ಉತ್ತರ ಪ್ರದೇಶ ಸರ್ಕಾರ ಈಗಾಗ್ಲೇ ಸೂಚನೆ ನೀಡಿದೆ.
2024ರ ಜನವರಿಯಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಲಿದೆ. ಸದ್ಯ ರಾಮಪಥದ ನಿರ್ಮಾಣ ಕೂಡ ಪ್ರಗತಿಯಲ್ಲಿದೆ. ರಾಮಜಾನಕಿ ಪಥ ಹಾಗೂ ಭಕ್ತಿ ಪಥ ನಿರ್ಮಾಣದ ಬಗ್ಗೆ ಕೂಡ ಯೋಜನೆ ರೂಪಿಸುತ್ತಿರುವುದಾಗಿ ಯುಪಿ ಸರ್ಕಾರ ಹೇಳಿದೆ. ರಾಮಪಥ 30 ಮೀಟರ್ ಅಗಲವಿದ್ದರೆ, ಭಕ್ತಿ ಪಥವನ್ನು 13 ಮೀಟರ್ ಅಗಲವಾಗಿ ನಿರ್ಮಾಣ ಮಾಡಲಾಗುವುದು.
ರಾಮ ಮಂದಿರಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳ ಪ್ರಗತಿಯನ್ನು ಖುದ್ದು ಸಿಎಂ ಯೋಗಿ ಆದಿತ್ಯನಾಥ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಯ ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಿಎಂ ಯೋಗಿ, ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.
ರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಸುತ್ತಮುತ್ತಲಿನ ಅಂಗಡಿಗಳನ್ನೆಲ್ಲ ತೆರವು ಮಾಡಲಾಗಿತ್ತು. ಅವರನ್ನು ಸಮೀಪದ ಕಾಂಪ್ಲೆಕ್ಸ್‌ಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಅಂಗಡಿ ಮಾಲೀಕರ ಸಹಕಾರವನ್ನು ಕೂಡ ಉತ್ತರ ಪ್ರದೇಶ ಸರ್ಕಾರ ಸ್ಮರಿಸಿದೆ.