ಬಂಟ್ವಾಳ: ದೈಹಿಕ ವ್ಯಾಯಾಮ ಕಡಿಮೆಯಾದಂತೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕಾದರೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದೇವು. ಆದರೆ ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ತೊಂದರೆಯಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಹಿರಿಯ ದಂತ ವೈದ್ಯಧಿಕಾರಿ ಡಾ.ಆರತಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ದ.ಕ.ಜಿ.ಪಂ. ಸರ್ಕಾರಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗ್ರಾಮ ಆರೋಗ್ಯ ಆಭಿಯಾನ, ತಂಬಾಕು ನಿಯಂತ್ರಣ, ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂಬಾಕು ತಿನ್ನುವುದಿಲ್ಲ ಮದ್ಯಪಾನವಷ್ಟೇ ಮಾಡುತ್ತೇವೆ, ಮದ್ಯಪಾನವಷ್ಟೇ ಮಾಡುತ್ತೇವೆ, ತಂಬಾಕು ತಿನ್ನುವುದಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಆದರೆ ಯಾವುದೇ ಕೆಟ್ಟ ಅಭ್ಯಾಸವಿದ್ದರೂ, ನಮ್ಮ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾ.ಪಂ. ಸಹಾಯಕ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೂ ಅಮೂಲ್ಯವಾದದ್ದು, ೩೦ ವರ್ಷ ದಾಟಿದ ಬಳಿಕ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಗ್ರಾಮ ಆರೋಗ್ಯ ಎಂಬುದು ಕೇವಲ ನರೇಗಾ ಕೂಲಿಕಾರರಿಗೆ ಮಾತ್ರ ಇರುವ ಅಭಿಯಾನವಲ್ಲ. ಗ್ರಾಮದ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಕಣ್ಣಿನ ತಪಾಸಣೆಯನ್ನೂ ಹಮ್ಮಿಕೊಂಡು ಕನ್ನಡಕ ವಿತರಣೆಯನ್ನೂ ಮಾಡಲಾಯಿತು. ಪಿಡಿಒ ಶಿವು ಬಿರಾದರ್ ಸ್ವಾಗತಿಸಿ, ವಂದಿಸಿದರು. ಗ್ರಾ.ಪಂ.ಅಧ್ಯಕ್ಷೆ ವಿನಿತಾ ಪುರುಷೋತ್ತಮ, ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮಾ, ತಾಲೂಕು ನರೇಗಾ ಐಇಸಿ ಸಂಯೋಜಕ ರಾಜೇಶ್, ಜಿಪಿಎಎಎ ತಾಲೂಕು ಸಂಯೋಜಕರಾದ ಅಲ್ಲಾಭಕ್ಷ್, ಮಿಥುನ್, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ವೈದ್ಯರು, ಶ್ರುಷೂಕಿಯರು, ಗ್ರಾಮದ ಜನರು ಭಾಗವಹಿಸಿದ್ದರು.