ಮಂಗಳೂರು ನಗರ ಉತ್ತರ ಕ್ಷೇತ್ರದಿಂದ 32,622 ಮತಗಳ ಅಂತರದಿಂದ 2ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರು ಪಕ್ಷ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ವಿಜಯೋತ್ಸವ ಕೈಗೊಂಡರು.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಓಪನ್ ಜೀಪ್ ಡ್ರೈವ್ ಮಾಡಿದ ಡಾ. ಭರತ್ ಶೆಟ್ಟಿ ಅವರು ಮಂಗಳಜ್ಯೋತಿ, ವಾಮಂಜೂರು ಜಂಕ್ಷನ್ ಮೂಲಕ ಗುರುಪುರ ಜಂಕ್ಷನ್, ಕೈಕಂಬ, ಕಂದಾವರ, ಮಳಲಿ, ಗಂಜಿಮಠ, ಮುತ್ತೂರು, ಕುಪ್ಪೆಪದವು, ಎಡಪದವು, ಮುಚ್ಚೂರು, ಸುಂಕದಕಟ್ಟೆ ಮೂಲಕ ವಾಮಂಜೂರಿನ ಜ್ಯೋತಿನಗರದವರೆಗೆ ವಿಜಯೋತ್ಸವ ಮುಂದುವರಿಸಿದರು.
ವಿಜಯೋತ್ಸವ ಮುಂದುವರಿದ ಪ್ರಮುಖ ಸ್ಥಳಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ಕೆಲವೆಡೆ ಶಾಲು ಹಾಕಿ ಗೌರವಿಸಲಾಯಿತು. ಮಳಲಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ಭೇಟಿ ನೀಡಿದ ಶಾಸಕರಿಗೆ ಹಿತೈಷಿಗಳು ಶಾಲು ಹೊದಿಸಿ ಗೌರವಿಸಿದರು.
ಮೆರವಣಿಗೆಯಲ್ಲಿ ನೂರಾರು ವಾಹನಗಳು ಒಳಗೊಂಡಿದ್ದವು. ಡಾ. ಭರತ್ ಶೆಟ್ಟಿ ಅವರೊಂದಿಗೆ ಬಿಜೆಪಿ ಮುಖಂಡರಾದ ತಿಲಕ್‌ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಹಾಗೂ ನೂರಾರು ಕಾರ್ಯಕರ್ತರು ಇದ್ದರು.