ಕೊಳ್ಳೇಗಾಲದ ಕುರುಬೂರು ಗ್ರಾಮದ ಬಳಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 10 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ 10 ಮಂದಿ ಕೂಡ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮೂಲದವರಾಗಿದ್ದು, ಸುಜಾತ, ಸಂದೀಪ್, ಮಂಜುನಾಥ್, ಪೂರ್ಣಿಮಾ, ಗಾಯತ್ರಿ, ಆದಿತ್ಯಾ, ಬಸವ, ಕೊಟ್ರೇಶ್ (45), ಪವನ್ (10), ಕಾರ್ತಿಕ್ (08) ಮೃತ ದುರ್ದೈವಿಗಳು.
ಮೂರು ದಿನ ಹಿಂದೆ ಬಳ್ಳಾರಿಯಿಂದ 11 ಮಂದಿ ಪ್ರವಾಸಕ್ಕೆಂದು ಬಂದಿದ್ದು, ಇವತ್ತು ಮೈಸೂರಿನಿಂದ ಇನ್ನೋವಾ ಕಾರಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಆದರೆ ದೇವರ ದರ್ಶನ ಪಡೆಯಬೇಕಿದ್ದವರು ಮಾರ್ಗ ಮಧ್ಯದಲ್ಲೇ ದೇವರ ಪಾದ ಸೇರಿದ್ದಾರೆ.
ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಭೀಕರ ಅಪಘಾತದ ದೃಶ್ಯಗಳು ಸೆರೆಯಾಗಿದೆ. ರಸ್ತೆಯ ತಿರುವಿನಲ್ಲಿ ಖಾಸಗಿ ಬಸ್ ಎದುರಿಗೇ ಇನ್ನೋವಾ ಕಾರು ವೇಗವಾಗಿ ಬಂದಿದೆ. ಬಸ್ ಚಾಲಕ ಕೂಡ, ಬಲಕ್ಕೆ ತೆಗೆದುಕೊಳ್ಳಲು ನೋಡಿದ್ದಾನೆ. ಆದ್ರೆ ಅಷ್ಟರಲ್ಲಾಗಲೇ ಅತಿ ವೇಗದಲ್ಲಿದ್ದ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಖಾಸಗಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊAಡಿದ್ದು, ಇನ್ನೋವಾ ಕಾರು ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿದೆ. ಇನ್ನು ಡಿಕ್ಕಿಯ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿವೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಆಂಬುಲೆನ್ಸ್ಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಈ ಭೀಕರ ಅಪಘಾತದಲ್ಲಿ ಪುಟ್ಟ ಬಾಲಕ ಪವಾಡ ಸದೃಶ್ಯ ರೀತಿ ಬದುಕುಳಿದಿದ್ದಾನೆ. ಆದರೆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಬಳಿ ಆಕ್ರಂದನ ಮುಗಿಲುಮುಟ್ಟಿತ್ತು.