Friday, September 20, 2024
ಸುದ್ದಿ

ಪಾನಿಪೂರಿ ತಯಾರಿಕಾ ಘಟಕಕ್ಕೆ ನಗರಸಭೆಯ ಅಧಿಕಾರಿಗಳ ದಾಳಿ – ಕಹಳೆ ನ್ಯೂಸ್

ಪುತ್ತೂರು:  ಸ್ವಚ್ಛತೆ ರಹಿತವಾಗಿ, ಅನುಮತಿ ಪಡೆದುಕೊಳ್ಳದೆ ಕಾರ್ಯಾಚರಿಸುತ್ತಿದ್ದ ಪಾನಿಪೂರಿ ತಯಾರಿಕಾ ಘಟಕವೊಂದರ ಮೇಲೆ ನಗರಸಭೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಪಾನಿ ಪೂರಿ ತಯಾರಿಕೆಗೆ ಬಳಸಲಾಗುತ್ತಿದ್ದ ಸ್ವತ್ತುಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಪಾನಿಪೂರಿ ತಯಾರಿಕಾ ಘಟಕದ ಮಾಲಕನಿಗೆ ನೋಟಿಸ್ ನೀಡಿದ್ದಾರೆ.

ಪುತ್ತೂರು ನಗರದ ಕೊಂಬೆಟ್ಟು ಎಂಬಲ್ಲಿರುವ ಆದಂ ಎಂಬವರ ಮಾಲಕತ್ವದ ಬಾಡಿಗೆ ಕೋಣೆಯಲ್ಲಿ ಉತ್ತರ ಭಾರತ ಮೂಲದವರಾದ ರೂಪ್ ಸಿಂಗ್, ಅವರ ಸಹೋದರ ಕುಲ್‍ದೀಪ್ ಸಿಂಗ್ ಎಂಬವರು ಸೇಲು, ಹನ್ಸು, ವಿಜಯ್ ಎಂಬವರನ್ನು ಸೇರಿಕೊಂಡು ಪಾನಿಪೂರಿ ತಯಾರಿಕಾ ಘಟಕ ನಡೆಸುತ್ತಿದ್ದರು. ಈ ಘಟಕದಲ್ಲಿ ಪಾನಿಪೂರಿ ತಯಾರಿಸಿ ಪುತ್ತೂರಿನ ವಿವಿಧ ಹೋಟೆಲ್‍ಗಳಿಗೆ ಹಾಗೂ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಈ ಪಾನಿಪೂರಿ ತಯಾರಿಕಾ ಘಟಕವನ್ನು ಸ್ವಚ್ಚತಾ ರಹಿತವಾಗಿ ನಡೆಸುತ್ತಿರುವ ಕುರಿತು ಸ್ಥಳಿಯರು ನಗರಸಭೆಗೆ ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಗುರುವಾರ ಪುತ್ತೂರು ನಗರಸಭೆಯ ಆಯುಕ್ತೆ ರೂಪಾ ಶೆಟ್ಟಿ ಅವರ ನೇತೃತ್ವದಲ್ಲಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ,ಪೌರಕಾರ್ಮಿಕರಾದ ಐತ್ತಪ್ಪ, ಗೋಪಾಲ, ಯಶೋಧಾ ಹಾಗೂ ಗುಲಾಬಿ ಅವರನ್ನೊಳಗೊಂಡ ತಂಡ ಸ್ಥಳೀಯ ನಗರಸಭೆಯ ಸದಸ್ಯ ಪಿ.ಜಿ.ಜಗನ್ನಿವಾಸ್ ಅವರ ಉಪಸ್ಥಿತಿಯಲ್ಲಿ ದಾಳಿ ನಡೆಸಿದೆ. ದಾಳಿಯ ವೇಳೆ ಪಾನಿಪೂರಿಯನ್ನು ಅವೈಜ್ಞಾನಿಕವಾಗಿ ನೆಲದ ಮೇಲೆಯೇ ತಯಾರಿಸುವುದು, ತಯಾರಿಕಾ ಘಟಕದ ಕೋಣೆ, ಪಾನಿಪೂರಿ ತಯಾರಿಕಾ ಪಾತ್ರೆಗಳು, ಪಾತ್ರೆ ತೊಳೆಯುವ ಕೋಣೆ ಶುಚಿತ್ವ ಇಲ್ಲದೆ ದುರ್ವಾಸನೆ ಬೀರುತ್ತಿರುವುದು ಕಂಡುಬಂದಿದೆ.

ಜಾಹೀರಾತು

ಘಟಕದಲ್ಲಿ ತಯಾರಿಸಿಟ್ಟಿದ್ದ 12 ಕೆಜಿಯಷ್ಟು ಪಾನಿಪೂರಿ, 5 ಕೆಜಿ ಕೊಳೆತ ಆಲೂಗಡ್ಡೆ, 5 ಕೆಜಿ ಪ್ಲಾಸ್ಟಿಕ್ ಚೀಲ ಹಾಗೂ ಪಾನಿಪೂರಿ ತಯಾರಿಕೆಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ನಗರಸಭೆಯ ಅಧಿಕಾರಿಗಳು ವಶಪಡಿಸಿಕೊಂಡು, ಅನುಮತಿ ಇಲ್ಲದ ಹಾಗೂ ಶುಚಿತ್ವ ಇಲ್ಲದ ಕಾರಣಕ್ಕಾಗಿ ಪಾನಿಪೂರಿ ತಯಾರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಘಟಕದ ಮಾಲಕ ರೂಪ್‍ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.