ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಲಿಂಗಾಯುತ ಪ್ರತ್ಯೇಕ ಧರ್ಮ ವಿವಾದವು ಆ ನಂತರ ತಣ್ಣಗಾದಂತೆ ಕಂಡಿತ್ತು. ಆದರೆ ಈಗ ಮತ್ತೆ ತಲೆ ಎತ್ತಿದೆ.
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವವನ್ನು ರವಾನಿಸಿತ್ತು. ಆದರೆ ಅದಿನ್ನೂ ಕೇಂದ್ರದ ಅಂಗಳದಲ್ಲಿಯೇ ಇದೆ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ‘ಮುನ್ನುಗ್ಗಿ ದೆಹಲಿಗೆ ಕಾರ್ಯಕ್ರಮವನ್ನು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಆಯೋಜಿಸಿದೆ. ಡಿಸೆಂಬರ್ 10, 11, 12 ರಂದು ದೆಹಲಿಯ ತಲಕೊಟ್ಟಾರ ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸುವಂತೆ ಲಿಂಗಾಯುತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಕರೆ ನೀಡಿದೆ.
ಹಾಗಾಗಿ ದೆಹಲಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಒತ್ತಡ ಹೇರಲಾಗುತ್ತಿದೆ. ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಮುಖಂಡರು ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ.