Friday, January 24, 2025
ಸುದ್ದಿ

ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆ: ಖಾಸಗಿ ಬಸ್ ಮಾಲೀಕರು ಏನಂತಾರೆ ಗೊತ್ತಾ.? -ಕಹಳೆ ನ್ಯೂಸ್

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಕುರಿತಾಗಿ ನಿನ್ನೆ ಮಾಜಿ ಸಚಿವ ವಿ. ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದರು. ಕರಾವಳಿಯ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಬೇಕು ಎಂದಿದ್ದರು.

ಮಾಜಿ ಸಚಿವರ ಈ ಅನಿಸಿಕೆ ಸಂಬAಧ ಇದೀಗ ಖಾಸಗಿ ಬಸ್ ಮಾಲೀಕರ ಕಡೆಯಿಂದಲೇ ಪ್ರತಿಕ್ರಿಯೆ ಬಂದಿದೆ. ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಖಾಸಗಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡಿಕೆಗೆ ನಮ್ಮ ಸಹಮತ ಇದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಇವರು, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇದಕ್ಕೆ ನಮ್ಮ ಸಹಮತ ಇದೆ ಎಂದಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದೆ. ಸರ್ಕಾರದ ವಾಗ್ದಾನದ ಪ್ರಕಾರ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಘೋಷಣೆಯಾಗಿದೆ. ಸರ್ಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ನೀಡಿ. ಅದು ಹಣದ ರೂಪದಲ್ಲಿ ಅಲ್ಲವಾದರೂ ತೆರಿಗೆ ವಿನಾಯಿತಿ, ಡೀಸೆಲ್ ಸಬ್ಸಿಡಿ ರೂಪದಲ್ಲಿ ಕೊಡಿ. ನಮಗೆ ಆಗುವ ಹೊರೆಯನ್ನು ಭರಿಸಿದರೆ ಉಚಿತ ಪ್ರಯಾಣ ಒದಗಿಸಲು ನಾವೂ ಸಿದ್ಧ ಎಂದು ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರ ನಮಗೆ ಹಣದ ರೂಪದಲ್ಲಿ ನೀಡುವುದು ಬೇಡ, ಕೆಎಸ್‌ಆರ್‌ಟಿಸಿಗೆ ಅನ್ವಯಿಸುವ ಮಾನದಂಡ ನಮಗೂ ಅನ್ವಯಿಸಲಿ. ಉಚಿತವಾಗಿ ವ್ಯವಸ್ಥೆ ಕಲ್ಪಿಸಲು ನಾವು ತಯಾರಿದ್ದೇವೆ, ಹತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚು ಖಾಸಗಿ ಬಸ್‌ಗಳು ಇವೆ, ಏಳು ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ಭಾಗಶಃ ಇವೆ. ಆ ಪೈಕಿ ಮಂಗಳೂರು, ಉಡುಪಿ, ಶಿವಮೊಗ್ಗ, ತುಮಕೂರು ಭಾಗಗಳಲ್ಲಿ ಹೆಚ್ಚು ಖಾಸಗಿ ಬಸ್ಸುಗಳಿವೆ ಎಂದಿರುವ ಸುರೇಶ್ ನಾಯಕ್, ಈ ಯೋಜನೆ ಖಾಸಗಿ ಬಸ್‌ಗಳಿಗೆ ಅನ್ವಯವಾಗದಿದ್ದರೆ ಇಂಥ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಾರೆ ಎಂದಿದ್ದಾರೆ.

ಈ ಯೋಜನೆ ಸರ್ಕಾರಕ್ಕೆ ಹೊರೆಯಾಗಬಹುದು, ಅಭಿವೃದ್ಧಿ ಕುಂಠಿತವೂ ಆಗಬಹುದು. ಉಚಿತ ಎನ್ನುವ ವ್ಯವಸ್ಥೆ ಮುಂದೆ ದೇಶಕ್ಕೆ ಮಾರಕವೂ ಆಗಬಹುದು. ಶ್ರೀಲಂಕಾ ಪಾಕಿಸ್ತಾನ ದೇಶಗಳ ಪರಿಸ್ಥಿತಿ ಬರುವ ಆತಂಕ ಇದೆ. ರಾಜ್ಯದಲ್ಲಿ ಡೀಸೆಲ್ ದರ ಇತರ ರಾಜ್ಯಗಳ ಹೋಲಿಕೆಯಲ್ಲಿ ಕಡಿಮೆ ಇದೆ. ಮುಂದೆ ಇದು ಹೆಚ್ಚಳವಾಗುವ ಆತಂಕವೂ ಇದೆ. ಆರು ವರ್ಷಗಳಿಂದ ಬಸ್ ದರ ಹೆಚ್ಚಳ ಆಗಿಲ್ಲ, ಎಲ್ಲವನ್ನು ಜನರ ತಲೆಯ ಮೇಲೆ ಹಾಕುವ ಅಪಾಯವೂ ಇದೆ ಎಂಬ ಮಾತನ್ನೂ ಅವರು ಹೇಳಿದ್ದಾರೆ.