ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯಥಾಸ್ಥಿತಿಯಲ್ಲಿ ಕ್ಷಯ ಬಾಧಿತರ ಸಂಖ್ಯೆ ; ಕ್ಷಯ ನಿರ್ಮೂಲನೆ ಇಲಾಖೆಗೆ ಸವಾಲು – ಕಹಳೆ ನ್ಯೂಸ್
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕ್ಷಯ ರೋಗ ಸೋಂಕಿತರ ಪ್ರಕರಣಗಳು ಯಥಾಸ್ಥಿತಿಯಲ್ಲಿವೆ. ಒಂದು ವರ್ಷ ಸ್ವಲ್ಪ ಕಡಿಮೆಯಾದರೆ, ಮತ್ತೂಂದು ವರ್ಷ ಏರಿಕೆಯಾಗುತ್ತಿದ್ದು, ಸಂಪೂರ್ಣ ಕ್ಷಯ ನಿರ್ಮೂಲನೆ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ದೇಶದಲ್ಲಿ 2030ರೊಳಗೆ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವ ಉದ್ದೇಶ ಹೊಂದಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಇಲಾಖೆಗಳ ಮೂಲಕ ಕಾರ್ಯಪ್ರವೃತ್ತವಾಗಿವೆ. ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಕ್ಷಯ ಕಾಣಿಸಿಕೊಂಡಿರುವುದೂ ಇದೆ. ದ.ಕ.ದಲ್ಲಿ ಸದ್ಯ 1,082, ಉಡುಪಿಯಲ್ಲಿ 414 ಮಂದಿ ಬಾಧಿತರು ಇದ್ದಾರೆ.
ದೀರ್ಘ ಕಾಲ ಕೆಮ್ಮು
ಕೋವಿಡ್ ಬಳಿಕ ಕೆಲವರಲ್ಲಿ ಕೆಮ್ಮು ಆರಂಭವಾದರೆ ಬೇಗನೇ ಗುಣವಾಗದೆ ಎರಡು ತಿಂಗಳು ನಿರಂತರವಾಗಿ ಕೆಮ್ಮುವುದು, ಕಫ ಮುಂದುವರಿಯುತ್ತಿದೆ. ವಾತಾವರಣದಲ್ಲಿನ ಧೂಳು, ಹೊಗೆ ಕ್ಷಯ ರೋಗಿಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಅಂತಹವರು ಮಾಸ್ಕ್ ಧರಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.
ಪೌಷ್ಟಿಕ ಆಹಾರಕ್ಕೆ ಸಹಾಯಧನ
ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಸೇವನೆಗಾಗಿ ಚಿಕಿತ್ಸಾ ಅವಧಿಯಲ್ಲಿ ಕೇಂದ್ರ ಸರಕಾರ “ನಿಕ್ಷಯ್ ಪೋಷಣ್’ ಯೋಜನೆಯ ಮೂಲಕ ಮಾಸಿಕ 500 ರೂ. ಒದಗಿಸುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಆಹಾರ ಸೇವನೆಯೂ ಅಗತ್ಯ. ಆದರೆ ಈ ಮೊತ್ತದಲ್ಲಿ ಉತ್ತಮ ಆಹಾರ ಸೇವನೆ ಆಸಾಧ್ಯ, ಮೊತ್ತವನ್ನು ಹೆಚ್ಚಿಸಬೇಕು ಎನ್ನುವ ಆಗ್ರಹವೂ ಇದೆ. ಕೆಲವರಿಗೆ ನಿಕ್ಷಯ್ ಪೋಷಣ್ ಅನುದಾನವೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎನ್ನುವ ಆರೋಪವೂ ಕೇಳಿಸುತ್ತಿದೆ. ಇನ್ನೊಂದೆಡೆ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಘಟಕವು ಪ್ರಾಯೋಜಕರ ಸಹಕಾರದಲ್ಲಿ ಪೌಷ್ಟಿಕ ಆಹಾರ ಕಿಟ್‌ಗಳನ್ನು ರೋಗಿಗಳಿಗೆ ಒದಗಿಸುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ಉಚಿತವಾಗಿ ದೊರೆಯುವುದರಿಂದ ಸಮಸ್ಯೆಯಾಗಿಲ್ಲ