ಜನವಸತಿ ಪ್ರದೇಶದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಒಡೆತನದ ಮಶ್ರೂಮ್ ಫ್ಯಾಕ್ಟರಿಯಿಂದ ಗಬ್ಬುನಾತ, ಧರಣಿ ಆರಂಭಿಸಿದ ಸ್ಥಳೀಯರು – ಕಹಳೆ ನ್ಯೂಸ್
ಮಂಗಳೂರಿನಲ್ಲಿ ಮಾಜಿ ಶಾಸಕರೊಬ್ಬರ ಪಾಲುದಾರಿಕೆಯ ಮಶ್ರೂಮ್ ಫ್ಯಾಕ್ಟರಿ (Mushroom factory) ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಅಣಬೆ ಫ್ಯಾಕ್ಟರಿ ಯಿಂದ ಬರುವ ದುರ್ನಾತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜನ, ಫ್ಯಾಕ್ಟರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ಫ್ಯಾಕ್ಟರಿ ಸ್ಥಳಾಂತರಕ್ಕೆ ಪಟ್ಟು ಹಿಡಿದಿದ್ದಾರೆ. ಇಂದು ವಾಮಾಂಜೂರು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಫ್ಯಾಕ್ಟರಿ ವಿರುದ್ದ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಊರು ತುಂಬಾ ಗಬ್ಬೆದ್ದು ನಾರುವ ಮಶ್ರೂಮ್ ಫ್ಯಾಕ್ಟರಿಯ ದುರ್ನಾತದಿಂದ (pollution) ನಮಗೆ ಬದುಕಲು ಸಾಧ್ಯವಿಲ್ಲ. ಊಟ ಮಾಡಲಾಗುತ್ತಿಲ್ಲ, ಉಬ್ಬಸ, ಕೆಮ್ಮು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಈ ಫ್ಯಾಕ್ಟರಿಯನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ – ಇದು ಮಂಗಳೂರಿನ ತಿರುವೈಲ್ ವಾರ್ಡ್ ನ (Thiruvail ward in Mangalore) ನಾಗರಿಕರು ವೈಟ್ ಗ್ರೋವ್ ಅಗ್ರಿ ಎಲ್‌ಎಲ್ ಪಿ ಮಶ್ರೂಮ್ ಫ್ಯಾಕ್ಟರಿ ವಿರುದ್ದ ಆಕ್ರೋಶ (Protest) ವ್ಯಕ್ತಪಡಿಸುತ್ತಿರುವ ಪರಿ.
ಫ್ಯಾಕ್ಟರಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಜನರ ಆಕ್ರೋಶ. ಮಂಗಳೂರಿನ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್. ಲೋಬೊ (Ex MLA JR Lobo) ಅವರ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ವೈಟ್ ಗ್ರೋವ್ ಅಗ್ರಿ ಎಲ್‌ಎಲ್ ಪಿ ಮಶ್ರೂಮ್ ಫ್ಯಾಕ್ಟರಿಯ ವಿರುದ್ಧ ಸ್ಥಳೀಯ ಜನರು ತಿರುಗಿ ಬಿದ್ದಿದ್ದಾರೆ. ಕೊರೊನಾ ಸಂದರ್ಭ ಚಾಕಲೇಟ್ ತಯಾರಿಕಾ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಮಶ್ರೂಮ್ ಬೆಳೆಸಲಾಗುತ್ತಿದೆ. ನಿತ್ಯವೂ ಸಂಜೆ 4 ಗಂಟೆಯಾಗುತ್ತಿದ್ದಂತೆ ತಿರುವೈಲು ಸೇರಿದಂತೆ ವಾಮಂಜೂರು ವ್ಯಾಪ್ತಿಯಲ್ಲಿ ಗಬ್ಬು ವಾಸನೆ ಬರಲು ಆರಂಭವಾಗುತ್ತದೆ. ಸಹಿಸಲು ಅಸಾಧ್ಯವಾದ ವಾಸನೆಯ ಪರಿಣಾಮ ಈ ಫ್ಯಾಕ್ಟರಿ ವಿರುದ್ಧ ಕಳೆದ ಒಂದು ವರ್ಷದಿಂದ ನಾಗರಿಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಕ್ಕೆ ಕಿಮ್ಮತ್ತಿನ ಬೆಲೆಯೂ ಸಿಕ್ಕಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಫ್ಯಾಕ್ಟರಿಗೆ ಆಗಮಿಸಿದ ಮಾಜಿ ಶಾಸಕ ಲೋಬೊ ಅವರಲ್ಲಿಯೇ ನಾಗರಿಕರು ಮನವಿ ಮಾಡಿದಾಗ ‘ತಾವು ಸಾಕಷ್ಟು ಬಂಡವಾಳ ವ್ಯಯ ಮಾಡಿ ಫ್ಯಾಕ್ಟರಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ’ ಎಂದು ಹೇಳಿದ್ದರು. ಆದರೆ ಸ್ಥಳೀಯರಿಗೆ ಬದುಕಲು ಬಿಡದೆ ಇವರು ಫ್ಯಾಕ್ಟರಿ ನಡೆಸುವುದು ಎಷ್ಟು ಸರಿ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಗುರುವಾರದಿಂದ ವಾಮಂಜೂರು ಪ್ರದೇಶವನ್ನು ಬಂದ್ ಮಾಡಿ ಅನಿರ್ದಿಷ್ಟಸವಧಿ ಧರಣಿ ಆರಂಭಿಸಿದ್ದಾರೆ.
ಈ ಹಿಂದೆ ಫ್ಯಾಕ್ಟರಿಯನ್ನು ಸ್ಥಗಿತಗೊಳಿಸುವಂತೆ ನಾಗರಿಕರು ವಾಮಂಜೂರಿನಿಂದ ಫ್ಯಾಕ್ಟರಿ ಗೇಟ್ ವರೆಗೆ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಗೇಟ್ ಗೆ ಬೀಗ ಜಡಿದು ಪರಿಸ್ಥಿತಿ ನಿಯಂತ್ರಿಸಿದ್ದರು. ಆದರೆ ಸಮಸ್ಯ ಇನ್ನೂ ಮುಂದುವರೆದಿರುವ ಕಾರಣ ಈಗ ಮತ್ತೆ ರೊಚ್ಚಿಗೆದ್ದಿದ್ದಾರೆ. ಜನವಸತಿ ಪ್ರದೇಶದಲ್ಲಿ ಫ್ಯಾಕ್ಟರಿ ಆರಂಭಿಸಲು ಅನುಮತಿ ನೀಡಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.