Thursday, January 23, 2025
ಸುದ್ದಿ

ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ… ಶಕ್ತಿ ಯೋಜನೆ ಅದ್ಧೂರಿ ಚಾಲನೆಗೆ ಸಿದ್ಧತೆ – ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಐದು ಗ್ಯಾರಂಟಿಗಳಲ್ಲೊಂದಾದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಇಂದು ಚಾಲನೆ ಸಿಗಲಿದೆ.‌ ವಿಧಾನಸೌಧದ ಮುಂಭಾಗ ಭಾನುವಾರ ಬೆಳಗ್ಗೆ 12 ಗಂಟೆಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿಯಾಗಿ ಚಾಲನೆ ನೀಡಲಿದ್ದಾರೆ.

ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಶಕ್ತಿ ಯೋಜನೆಗೆ ಭಾನುವಾರ (ಜೂ. 11) ಚಾಲನೆ ಸಿಗಲಿದೆ. ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆ ಮೂಲಕ ಇಂದು ಮಧ್ಯಾಹ್ನದಿಂದ ರಾಜ್ಯದ ಮಹಿಳೆಯರು ಕೆಎಸ್‌ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ವಿಧಾನಸೌಧ ಮುಂಭಾಗದ ಗ್ರಾಂಡ್ ಸ್ಟೆಪ್ ಮುಂದೆ ಶಕ್ತಿ ಯೋಜನೆಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ವಿಧಾನಸೌಧದ ಮುಂದೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಮಧ್ಯಪ್ರದೇಶದಿಂದ ಆಗಮಿಸಿ ಮಧ್ಯಾಹ್ನ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾಜ್ಯದ ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್​​ಗಳಲ್ಲಿ ಉಚಿತವಾಗಿ ಓಡಾಡಬಹುದು. ಉಚಿತ ಪ್ರಯಾಣ ಯೋಜನೆಯು ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. 18,609 ಬಸ್‌ಗಳ ಸೇವೆಯು ಉಚಿತ ಪ್ರಯಾಣಕ್ಕೆ ಲಭ್ಯವಿದೆ. ಈ ಯೋಜನೆಗೆ ವಾರ್ಷಿಕ 4051.56 ಕೋಟಿ ರೂ. ವೆಚ್ಚವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಚಾಲನೆ: ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾಂಕೇತಿಕವಾಗಿ ಟಿಕೆಟ್ ನೀಡಿ ಚಾಲನೆ ಕೊಡಲಾಗುತ್ತದೆ.

ಈ ಸಂಬಂಧ ಮಾತನಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ಉಚಿತ ಬಸ್​​ಗಳಲ್ಲಿ ಸ್ಟಿಕರ್ ಅಂಟಿಸುತ್ತೇವೆ. ಸಾರಿಗೆ ಎಕ್ಸ್ ಪ್ರೆಸ್ ಬಸ್​ಗಳಲ್ಲೂ ಉಚಿತ ಪ್ರಯಾಣ ಇರಲಿದೆ. ಇಂದಿನ ಸಮಾರಂಭಕ್ಕೆ ಎಲ್ಲ ಸಾರ್ವಜನಿಕರಿಗೂ ಆಹ್ವಾನ ಕೊಡಲಾಗಿದೆ. ಸಿಎಂ, ಡಿಸಿಎಂ ಸೇರಿದಂತೆ ವಿಪಕ್ಷದವರಿಗೂ ಆಹ್ವಾನ ಕೊಟ್ಟಿದ್ದೇವೆ. ಬಳಿಕ ವಿಧಾನಸೌಧದಿಂದ ಬಿಎಂಟಿಸಿ ಬಸ್ ನಲ್ಲಿ ಸಿಎಂ, ಡಿಸಿಎಂ ಸೇರಿ ಪ್ರಮುಖರು ತೆರಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಮುನ್ನ ಸಿಎಂ ಸಿದ್ದರಾಮಯ್ಯ ಕಂಡಕ್ಟರ್ ಆಗಿ ಮೆಜೆಸ್ಟಿಕ್​​ನಿಂದ ವಿಧಾನಸೌಧವರೆಗೆ ಬಿಎಂಟಿಸಿ‌ ಬಸ್ ನಲ್ಲಿ ಮಹಿಳಾ ಪ್ರಯಾಣಿಕರಿಗೆ ಸಾಂಕೇತಿಕವಾಗಿ ಟಿಕೆಟ್ ನೀಡುವುದಾಗಿ ಹೇಳಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಬದಲಾವಣೆ ಆಗಿದ್ದು, ಚಾಲನೆ ಕೊಟ್ಟ ಬಳಿಕ ಬಸ್​ನಲ್ಲಿ ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ತೆರಳಲಿದ್ದಾರೆ.

ಮಹಿಳಾ ಪ್ರಯಾಣಿಕರಿಗೆ ವಿಶೇಷ ಸ್ಮಾರ್ಟ್ ಕಾರ್ಡ್ ಮಾಡಿಕೊಳ್ಳಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಅಲ್ಲಿ ತನಕ ಅಡ್ರೆಸ್ ಪ್ರೂಫ್ ಒಂದು ತೋರಿಸಬೇಕು. ಎರಡ್ಮೂರು ತಿಂಗಳಲ್ಲಿ ಎಷ್ಟು ಜನ, ಎಷ್ಟು ಕಿ.ಮೀ ಓಡಾಡಿದ್ರು ಅಂತಾ ಹೊತ್ತಾಗಲಿದೆ. ಮಹಿಳಾ ಪ್ರಯಾಣಿಕರಿಗೆ ಜೀರೋ ಅಮೌಂಟ್ ಟಿಕೆಟ್ ಕೊಡಲಾಗುವುದು. ಕಾರ್ಯಕ್ರಮ ಹೊಸದು, ಸಣ್ಣಪುಟ್ಟ ಲೋಪದೋಷ ಆದ್ರೆ ಸರಿಮಾಡಿಕೊಂಡು ಹೋಗ್ತೇವೆ ಎಂದು ತಿಳಿಸಿದರು.

ಬಸ್ ನಿಲ್ಲಿಸದೇ ಹೋದ್ರೆ ಕ್ರಮ:ಇತ್ತ ಸರ್ಕಾರಿ ಬಸ್ ನಿಲ್ಲಿಸದೇ ಹೋದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಆರ್ ಟಿಸಿ ಎಂಡಿ ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ದರವನ್ನು ಸರ್ಕಾರ ಭರಿಸಲಿದೆ. ಹೀಗಾಗಿ ಮಹಿಳೆಯರಿಗೆ ಬಸ್ಸು ಚಾಲಕರು, ನಿರ್ವಾಹಕರು ಗೌರವ ಕೊಡಬೇಕು. ಮಹಿಳೆಯರಿಗೆ ಉಚಿತ ಅಂತ ಬಸ್​ ನಿಲ್ಲಿಸದೇ ಹೋದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಚಾಲಕರು ಹಾಗೂ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಎಸಿ, ನಾನ್ ಎಸಿ ಬಿಟ್ಟು ಎಲ್ಲ ಜನರಲ್ ಬಸ್​ಗಳಲ್ಲೂ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಮಹಿಳೆಯರು ಯಾವುದಾದರೂ ಗುರುತಿನ ಚೀಟಿ ತೋರಿಸಿ ಫ್ರೀ ಆಗಿ ಓಡಾಡಬಹುದು. ಕೆಲವೊಂದು ಕಡೆ ಬಸ್​ಗಳ ಕೊರತೆ ಇರೋದು ನಿಜ. ಅಲ್ಲಿಯೂ ಬಸ್ ಸಂಚಾರಕ್ಕೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇವೆ ಎಂದರು.

ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇವೆ.‌ ಇಂದಿನಿಂದ ಯೋಜನೆ ಸಂಬಂಧ ಸೇವಾ ಸಿಂಧು ಪೋರ್ಟಲ್ ಪ್ರಕ್ರಿಯೆ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯ ಷರತ್ತುಗಳೇನು?: ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್‌ ಪಡೆಯಬೇಕು. ಅದು ಸಿಗುವವರೆಗೆ ಕೇಂದ್ರ-ರಾಜ್ಯ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿ ಬಳಸಬಹುದು.

* ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್‌ ಕಾರ್ಡ್‌ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು.

* ಶಕ್ತಿ ಸ್ಮಾರ್ಟ್‌ ಕಾರ್ಡ್‌ ವಿತರಿಸುವವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಿಳಾಸವಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ ಶೂನ್ಯ ಟಿಕೆಟ್‌ ನೀಡಲಾಗುವುದು.

* ರಾಜ್ಯದ ಒಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಎಲ್ಲ ಅಂತಾರಾಜ್ಯ ಸಾರಿಗೆ ಟ್ರಿಪ್‌ಗಳು ಯೋಜನೆಯಿಂದ ಹೊರಕ್ಕೆ

* ಕರ್ನಾಟಕದ ಮಹಿಳೆಯರು ಮಾತ್ರ ಉಚಿತ ಬಸ್ ಪ್ರಯಾಣದ ಲಾಭ ಪಡೆಯಬಹುದು

* ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

* ರಾಜಹಂಸ, ನಾನ್‌ ಎ ಸಿ- ಸ್ಲೀಪರ್‌, ವಜ್ರ, ವಾಯು ವಜ್ರ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌, ಐರಾವತ ಗೋಲ್ಡ್‌ ಕ್ಲಾಸ್‌, ಅಂಬಾರಿ, ಅಂಬಾರಿ ಡ್ರೀಮ್‌ ಕ್ಲಾಸ್‌, ಅಂಬಾರಿ ಉತ್ಸವ್‌, ಫ್ಲೈ ಬಸ್‌, ಇವಿ ಪವರ್‌ ಪ್ಲಸ್‌ಗಳಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ

* ಬಿಎಂಟಿಸಿ ಹೊರತುಪಡಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಎಲ್ಲ ಬಸ್‌ಗಳಲ್ಲಿ (ಅಂತಾರಾಜ್ಯ, ಹವಾ ನಿಯಂತ್ರಿತ ಮತ್ತು ಐಷಾರಾಮಿ ಹೊರತುಪಡಿಸಿ) ಶೇ. 50ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡಲಾಗುವುದು.

* ಲೈಂಗಿಕ ಅಲ್ಪಸಂಖ್ಯಾತರಿಗೂ ಯೋಜನೆಯಡಿ ಉಚಿತ ಬಸ್ ಪ್ರಯಾಣ ಅನ್ವಯವಾಗಲಿದೆ.

* ಲಗೇಜ್‌ ಕಂಡಿಷನ್ ಅನ್ವಯ, ಲಗೇಜ್ ಮಿತಿ ಮೀರಿದರೆ ಮಹಿಳೆಯರು ಲಗೇಜ್ ದರ ನೀಡಬೇಕು