ಜೂ.16ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ : ಅರುಣ್ ಪುತ್ತಿಲ, ಚಕ್ರವರ್ತಿ ಸೂಲಿಬೆಲೆ ಭಾಗಿ –ಕಹಳೆ ನ್ಯೂಸ್
ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಜೂ.16ರಿಂದ 22ರ ವರಗೆ ಗೋವಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ 11ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮುಂದೆ ನಡೆಯುವ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಗೌರವಾನ್ವಿತರ ಸಂದರ್ಶನ ಈ ಬಾರಿಯ ಅಧಿವೇಶನದ ವಿಶೇಷ ಆಕರ್ಷಣೆಯಾಗಲಿದೆ. ಲವ್ ಜಿಹಾದ್, ಹಲಾಲ್ ಸರ್ಟಿಫೀಕೇಶನ್, ಲ್ಯಾಂಡ್ ಜಿಹಾದ್, ಕಾಶಿ-ಮಥುರಾ ಮುಕ್ತಿ, ಮತಾಂತರ, ಗೋಹತ್ಯೆ, ಕೋಟೆ ದೇವಸ್ಥಾನಗಳ ಮೇಲಿನ ಇಸ್ಲಾಮಿ ಅತಿಕ್ರಮಣ, ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ಕಾಶ್ಮೀರಿ ಹಿಂದೂ ಪುನರ್ವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲೆ ವಿಚಾರ ವಿನಿಮಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಧಿವೇಶನದಲ್ಲಿ ಅಮೆರಿಕ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಡ್, ಸಿಂಗಾಪುರ ಹಾಗೂ ಭಾರತದ 28 ರಾಜ್ಯದಲ್ಲಿನ 350ಕ್ಕೂ ಅಧಿಕ ಹಿಂದೂ ಸಂಘಟನೆಗಳ 1500ಕ್ಕಿಂತ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕರ್ನಾಟಕದಿಂದ ಚಕ್ರವರ್ತಿ ಸೂಲಿಬೆಲೆ, ದಕ್ಷಿಣ ಕನ್ನಡದ ಹಿಂದೂ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಡಾ.ಎಸ್.ಆರ್. ಲೀಲಾ, ಅಡ್ಡಂಡ ಕಾರ್ಯಪ್ಪ, ರುಕ್ಮಿಣಿ ವಲ್ಲಭ ಪೀಠದ ಜಗದ್ಗರು ಧರ್ಮಾಚಾರ್ಯ ಜನಾರ್ದನ ಮಹಾರಾಜ್ ಮೇಟೆ ಸೇರಿದಂತೆ ರಾಜ್ಯ 250ಕ್ಕೂ ಅಧಿಕ ಹಿಂದುತ್ವವಾದಿ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ವಿಧಿಜ್ಞ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ಅಮೃತೇಶ್ ಎನ್.ಪಿ., ಹಿಂದೂ ಜೈ ಭೀಮ್ ಸಂಘಟನೆ ಅಧ್ಯಕ್ಷ ಚಂದ್ರಶೇಖರ್, ಅಯ್ಯಪ್ಪ ಸೇವಾ ಸಮಾಜಮ್ ಕರ್ನಾಟಕ ಅಧ್ಯಕ್ಷ ಎನ್.ಜಯರಾಮ, ರಾಮಾನುಜ ಪೀಠಂ, ಉದ್ಯಮಿ ಜಯರಾಮ ಎಸ್.ಉಪಸ್ಥಿತರಿದ್ದರು.