Recent Posts

Sunday, January 19, 2025
ಸುದ್ದಿ

ಖಾಸಗಿ ಬಸ್​ಗಳ “ಶಕ್ತಿ” ಕುಂದಿಸಿದ ಸರ್ಕಾರದ ಉಚಿತ ಪ್ರಯಾಣ : ನಮ್ಮ ಗೋಳು ಕೇಳೋರು ಯಾರು ಅಂತಿದ್ದಾರೆ ಖಾಸಗಿ ಬಸ್​ ಮಾಲೀಕರು – ಕಹಳೆ ನ್ಯೂಸ್

ಶಿವಮೊಗ್ಗ : ಕಳೆದ ಮೂರು ವರ್ಷಗಳಿಂದ ಕೋವಿಡ್​ನಿಂದಾಗಿ ಚೇತರಿಸಿಕೊಳ್ಳುತ್ತಿದ್ದ ಖಾಸಗಿ ಬಸ್ ಸೇವೆಯು ಇದೀಗ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರವು ಕೆಎಸ್​​ಆರ್​ಟಿಸಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಘೋಷಿಸಿರುವುದು ಖಾಸಗಿ ಬಸ್​ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಖಾಸಗಿ ಬಸ್​ ಮಾಲೀಕರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಮೊಗ್ಗ‌ ಜಿಲ್ಲೆಯಲ್ಲಿ ಶೇ.90 ರಷ್ಟು ಜನರು ಖಾಸಗಿ ಬಸ್​ಗಳನ್ನು ಅವಲಂಬಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಬೆಂಗಳೂರು ಹಾಗೂ ಹೊನ್ನಾಳಿ ಹಾಗೂ ಸಾಗರ ಮಾರ್ಗದಲ್ಲಿ KSRTC ಬಸ್​​ಗಳು ಸಂಚಾರ ನಡೆಸುತ್ತವೆ. ಉಳಿದಂತೆ ಶಿವಮೊಗ್ಗ ನ್ಯಾಮತಿ, ಚನ್ನಗಿರಿ, ತೀರ್ಥಹಳ್ಳಿ, ಸಾಗರ, ಹೊಸನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಖಾಸಗಿ ಬಸ್​ಗಳು ತಮ್ಮ ಸೇವೆಯನ್ನು‌ ನೀಡುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೀಗ ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಘೋಷಿಸಿದ ನಂತರ ಖಾಸಗಿ ಬಸ್​ನಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮಧ್ಯಾಹ್ನದಿಂದ ಉಚಿತ ಪ್ರಯಾಣ ಜಾರಿಯಾಗಿದೆ. ಖಾಸಗಿ ಬಸ್​ನಲ್ಲಿ ಪ್ರತಿ‌ನಿತ್ಯ ಪ್ರಯಾಣ ಮಾಡುತ್ತಿದ್ದ ಮಹಿಳೆಯರು ಇಂದು ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಖಾಸಗಿ ಬಸ್​ ಮಾಲೀಕರು ಕಂಗಾಲಾಗಿದ್ದಾರೆ.

ಉಚಿತ ಸೇವೆ ವಿರುದ್ದ ಖಾಸಗಿ ಬಸ್ ಮಾಲೀಕರ, ನಿರ್ವಾಹಕರ ಆಕ್ರೋಶ: ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಉಚಿತ ಪ್ರಯಾಣ ಪ್ರಾರಂಭಿಸಿರುವುದರಿಂದ ನಮ್ಮ‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಉಚಿತ ಸೇವೆಯಿಂದ ಖಾಸಗಿ ಬಸ್​ನವರು ತಮ್ಮ ಉದ್ಯಮವನ್ನೇ ಮುಚ್ಚಬೇಕಾದ ಪರಿಸ್ಥಿತಿ ಬಂದೊದಗಿದೆ. ಖಾಸಗಿ ಬಸ್​​ಗಳು ಮಹಿಳೆಯರಿಲ್ಲದೆ ಖಾಲಿ ಹೊಡೆಯುತ್ತಿವೆ. ಸರ್ಕಾರಿ ಬಸ್ ಸಂಚಾರ ಇಲ್ಲದ ಕಡೆಗಳಲ್ಲಿ ಮಾತ್ರ ಮಹಿಳೆಯರು ಖಾಸಗಿ ಬಸ್ ನಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದುಖಾಸಗಿ ಬಸ್ ಮಾಲೀಕರು, ನಿರ್ವಾಹಕರು ಆಕ್ರೋಶ ಹೊರಹಾಕಿದ್ದಾರೆ.

ಶಾಲೆ, ಕಾಲೇಜು ಸೇರಿದಂತೆ ಉದ್ಯೋಗಕ್ಕೆ ತೆರಳುವ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿರುವುದರಿಂದ ಖಾಸಗಿ ಬಸ್​ನಲ್ಲಿ ಜನ ಇಲ್ಲದಾಗಿದೆ. ಹೀಗಾದರೆ ನಾವು ಬಸ್ ನಡೆಸುವುದು ಹೇಗೆ ಎಂದು ಬಸ್ ಮಾಲೀಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಾವು ಸರ್ಕಾರಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಕಟ್ಟುತ್ತೇವೆ. ಚಾಲಕರು, ನಿರ್ವಾಹಕರು, ಕ್ಲೀನರ್​ಗಳು, ಬಸ್ ಏಜೆಂಟ್​ಗಳು ಸೇರಿದಂತೆ ಸ್ಟ್ಯಾಂಡ್ ಏಜೆಂಟ್​ಗಳು, ಮೆಕ್ಯಾನಿಕ್​ನವರು, ಟೈಯರ್ ಅಂಗಡಿಯವರು, ಫೈನಾಷಿಯರ್ಸ್ ಸೇರಿದಂತೆ ಇನ್ನೂ ಹಲವರು ನಮ್ಮ‌ಉದ್ಯಮವನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕೋವಿಡ್ ನಂತರ ಚೇತರಿಕೆ ಕಂಡ ನಮ್ಮ‌ಉದ್ಯಮ ಇದೀಗ ಮತ್ತೆ ಸಂಪೂರ್ಣ ನೆಲ ಕಚ್ಚುವಂತಾಗಿದೆ. ನಮಗೂ ಸರ್ಕಾರ ಉಚಿತ ಪ್ರಯಾಣ ಒದಗಿಸಲು ಅವಕಾಶ ನೀಡಬೇಕು. ನಮಗೂ ಕೆಎಸ್‌ಆರ್​​ಟಿಸಿ ಬಸ್​​ನಂತೆ ಡೀಸೆಲ್​​ನಲ್ಲಿ ವಿನಾಯತಿ, ತೆರಿಗೆ ವಿನಾಯಿತಿ ನೀಡಬೇಕು ಹೀಗೆ ಮಾಡಿದರೆ ನಾವು ಕೂಡ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲು ಸಿದ್ಧರಿದ್ದೇವೆ ಎಂದು ಶಿವಮೊಗ್ಗ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮೀಸೆ ರಂಗಪ್ಪ ಹೇಳಿದ್ದಾರೆ.

ಖಾಸಗಿ ಬಸ್ ಮಾಲೀಕರು ಲಕ್ಷಾಂತರ ರೂ. ಸಾಲ ಮಾಡಿ ಉದ್ಯಮ ಪ್ರಾರಂಭಿಸಿದ್ದಾರೆ. ಈ ಸಾಲಕ್ಕೆ ಬಡ್ಡಿ ಕಟ್ಟಬೇಕು. ನಾವು ಖಾಸಗಿ ಬಸ್​ಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಬಸ್ ನಿಂತರೆ ನಮ್ಮನ್ನೆಲ್ಲಾ ಸರ್ಕಾರ ಸಾಕುತ್ತಾ, ನಮ್ಮ ಸಂಸಾರವನ್ನು ಸರ್ಕಾರ ನೋಡಿ‌ಕೊಳ್ಳುತ್ತಾ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇನ್ನು ಉಚಿತ ಯೋಜನೆಯನ್ನು ಬಡ ಮಹಿಳೆಯರಿಗೆ ಮಾಡಿದರೆ ಸಾಕಾಗಿತ್ತು. ಉಚಿತ ಪ್ರಯಾಣದಿಂದ ಮಹಿಳೆಯರು ಖಾಸಗಿ ಬಸ್​ನಲ್ಲಿ ಬರುತ್ತಿಲ್ಲ. ನಮ್ಮ ಬಸ್ ಮಾಲೀಕರು ನಷ್ಟ ಎಂದು ಬಸ್​ ಸಂಚಾರ ನಿಲ್ಲಿಸಿದರೆ ನಾವು ಏನು ಮಾಡಬೇಕು. ಸರ್ಕಾರ ನಮಗೆಲ್ಲ ಉದ್ಯೋಗ ‌ನೀಡಬೇಕು ಎಂದು ನಿರ್ವಾಹಕರಾದ ರಾಜು, ಬಾಬು, ಸತೀಶ್ ಒತ್ತಾಯಿಸಿದ್ದಾರೆ.