ಚಂದ್ರಯಾನ-3 ಉಡಾವಣೆಗೆ ಎಲ್ಲಾ ಯಶಸ್ವಿ ಪರೀಕ್ಷೆಯ ಬಳಿಕ ಇದೀಗ ದಿನಾಂಕ ನಿಗದಿ ಮಾಡಲಾಗಿದೆ. ಜುಲೈ 12-19ರ ನಡುವೆ ಚಂದ್ರಯಾನ ಉಡಾವಣೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾಹಿತಿ ನೀಡಿದ್ದಾರೆ.
ಆಂಧ್ರದ ಶ್ರೀಹರಿಕೋಟಾದಿಂದ ಚಂದ್ರಯಾನ ಉಡಾವಣೆಯಾಗಲಿದೆ. ಈಗಾಗಲೇ ಚಂದ್ರಯಾನದ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಉಡಾವಣೆಗೆ ಐಗಿಒ-3 ರಾಕೆಟ್ ಬಳಸಲಾಗುತ್ತಿದೆ
ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಇಳಿಸಲಾಗುವುದು.
ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು.
‘ಚಂದ್ರನ ವಿಜ್ಞಾನ’ ವಿಷಯವನ್ನು ಆಧರಿಸಿ ವೈಜ್ಞಾನಿಕ ಉಪಕರಣಗಳನ್ನು ಲ್ಯಾಂಡರ್ ಮತ್ತು ರೋವರ್‌ಗಳಿಗೆ ಅಳವಡಿಸಲಾಗಿದ್ದು, ಅಲ್ಲದೇ, ಸ್ಪೆಕ್ಟ್ರೊ–ಪೊಲಾರಿಮೆಟ್ರಿ ಎಂಬ ಸಾಧನವನ್ನೂ ಅಳವಡಿಸಲಾಗಿದೆ. ಇದರ ಮೂಲಕ ಭೂಮಿಯಿಂದ ಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಕಕ್ಷೆಯಿಂದಲೇ ಅಧ್ಯಯನ ಮಾಡಬಹುದಾಗಿದೆ.
ಉಡಾವಣೆ ಸಂದರ್ಭದಲ್ಲಿ ಉಂಟಾಗುವ ಅತ್ಯಧಿಕ ವೇಗ ಮತ್ತು ಅತೀವ ಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯದ ಅಗತ್ಯ ಪರೀಕ್ಷೆಗಳನ್ನು ಮಾರ್ಚ್ ಯಲ್ಲಿ ನಡೆಸಲಾಗಿದೆ. ಚಂದ್ರಯಾನ–3 ಅನ್ನು ಎಲ್‌ಎಂವಿ3 (ಉಡಾವಣಾ ವಾಹನ ಮಾರ್ಕ್3) ಮೂಲಕ ಉಡಾವಣೆ ಮಾಡಲಾಗುವುದು. ಹಿಂದೆ ಇದನ್ನು ಜಿಎಸ್‌ಎಲ್‌ವಿ ಎಂಕೆ 3 ಎಂದು ಕರೆಯಲಾಗುತ್ತಿತ್ತು. ಚಂದ್ರಯಾನ–3 ಯೋಜನೆ ಚಂದ್ರಯಾನ–2 ಮುಂದುವರಿದ ಭಾಗವಾಗಿದ್ದು, ಚಂದ್ರನ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸುವುದು ಮತ್ತು ರೋವರ್ ಸಂಚರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗಿದೆ.
ಕಳೆದ ಬಾರಿ ಚಂದ್ರಯಾನ ವಿಫಲವಾಗಿತ್ತು. ಆದರೆ ಈ ಬಾರಿ ಉಡಾವಣೆಗೂ ಮುನ್ನ ಹಲವು ಪರೀಕ್ಷೆ ನಡೆಯಲಿವೆ. ಎಲ್ಲಾ ಪರೀಕ್ಷೆ ಯಶಸ್ವಿ ನಂತರವೇ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್,ಹೇಳಿದ್ದಾರೆ.