Monday, November 25, 2024
ಸುದ್ದಿ

ಕುಂದಾಪುರದಲ್ಲಿ ಬೋನಿಗೆ ಬಿದ್ದ ಗಂಡು ಚಿರತೆ : 5 ವರ್ಷದಲ್ಲಿ 8 ಚಿರತೆ ಸೆರೆ..! –ಕಹಳೆ ನ್ಯೂಸ್

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಿಂಭಾಗದ ಹಾಡಿಯಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಗಂಡು ಚಿರತೆ ಸೆರೆಯಾಗಿದ್ದು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಕಳೆದ 5 ವರ್ಷದಲ್ಲಿ ಈ ಪ್ರದೇಶದಲ್ಲಿಟ್ಟ ಬೋನಿಗೆ ಬಿದ್ದ 8ನೇ ಚಿರತೆ ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಭಾಗದಲ್ಲಿ ಆಗ್ಗಾಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸಮೀಪದ ಶಾಲೆಗೆ ಬರುವ ವಿದ್ಯಾರ್ಥಿಗಳು ಕೂಡ ಚಿರತೆ ಕಾಟದಿಂದ ಭಯಭೀತರಾಗಿದ್ದರು.ಕಳೆದ ವಾರವಷ್ಟೇ ಇಲ್ಲಿಗೆ ಸಮೀಪದ ಕೆಲವು ಮನೆಗಳ ಅಂಗಳಕ್ಕೆ ಬಂದು ನಾಯಿ ಎಳೆದೊಯ್ಯಲು ಪ್ರಯತ್ನಿಸಿತ್ತು. ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕೆಲವು ದಿನಗಳ ಹಿಂದೆ ಬೋನು ಇಡಲಾಗಿದ್ದು ಅಂದಾಜು 4-5 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ಚಿರತೆ ಸೆರೆ ಕಾರ್ಯಾಚರಣೆಗೆ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಸಹಕಾರ ನೀಡುತ್ತಿದ್ದರು.

ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ಗಸ್ತು ಅರಣ್ಯ ಪಾಲಕಿ ಮಾಲತಿ, ಸ್ಥಳೀಯ ಪ್ರಮುಖರಾದ ಗಣಪತಿ ಟಿ. ಶ್ರೀಯಾನ್, ಸುರೇಶ್ ದೇವಾಡಿಗ, ಸತೀಶ್ ದೇವಾಡಿಗ ಮೊದಲಾದವರು ಭೇಟಿ ನೀಡಿದ್ದಾರೆ.
ಮಾಲಾಡಿ ಅಸುಪಾಸಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ಹೊತ್ತೊಯ್ದಿದೆ. ಹಾಡುಹಗಲೇ ಕಾಣಿಸಿಕೊಂಡು ಜನರಲ್ಲಿ ಭೀತಿ ಸೃಷ್ಟಿಸಿದೆ. ಈ ಭಾಗದಲ್ಲಿ ಮೊದಲಿಗೆ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ 2019 ಅ.6, ಡಿ.12, 2019, ಡಿ.24 ,2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ, 2022 ಅ.2 ರಂದು ಹಾಗೂ 2023 ಮಾ.10ರಂದು ಚಿರತೆ ಬೋನಿಗೆ ಬಿದ್ದಿದೆ. ಈ ವರ್ಷದಲ್ಲಿ ಸೆರೆಯಾದ ಎರಡನೇ ಚಿರತೆ ಇದಾಗಿದ್ದು ತೆಕ್ಕಟ್ಟೆ ಸಮೀಪದ ಮಾಲಾಡಿ ಭಾಗವು ಚಿರತೆಗಳ ಹಾಟ್ ಸ್ಫಾಟ್ ಆಗಿದೆ.

ಚಿರತೆ ಸೆರೆಯಾದ ಮಾಲಾಡಿ ಹಾಡಿ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಆತಂಕಗೊಂಡಿದ್ದಾರೆ.