ರೀಲ್ಸ್ ಆಯ್ತು, ಇದೀಗ ಆಭರಣದ ರೂಪದಲ್ಲೂ ಬಂದಿದೆ ಪಂಜುರ್ಲಿ : ತುಳುನಾಡ ಸಂಸ್ಕೃತಿಗೆ ಧಕ್ಕೆ ತಂದ ಕಾಂತಾರ – ಕಹಳೆ ನ್ಯೂಸ್
ಕಾಂತಾರ ಸಿನಿಮಾ ಬಂದಿದ್ದೇ ಬಂದಿದ್ದು ದೈವಾರಾಧನೆ ಅನ್ನೋದು ತನ್ನ ಪಾವಿತ್ರ್ಯತೆಯನ್ನೇ ಕಳೆದುಕೊಳ್ತಿದ್ಯಾ ಎಂಬ ಅನುಮಾನ ಮೂಡಿದೆ . ಕಾಂತಾರ ಸಿನಿಮಾ ವಿಶ್ವಾದ್ಯಂತ ಭಾರೀ ಸದ್ದು ಮಾಡ್ತಿದ್ದ ಸಮಯದಲ್ಲಿ ಪಂಜುರ್ಲಿ ದೈವದಂತೆ ವೇಷ ಕಟ್ಟಿ ರೀಲ್ಸ್ ಮಾಡುವವರ ಸಂಖ್ಯೆ ಏನು ಕಡಿಮೆ ಇರಲಿಲ್ಲ.
ಇದು ಸಾಲದು ಎಂಬಂತೆ ಎಷ್ಟೋ ಜನ ಬೆಂಗಳೂರಿನ ಕಡೆಯೆಲ್ಲ ದೈವಾರಾಧನೆ ಶುರು ಮಾಡಿದ್ದರು. ತುಳುನಾಡ ಸಂಸ್ಕೃತಿಗೆ ಇದರಿಂದ ಧಕ್ಕೆಯಾಗ್ತಿದೆ ಎಂದು ಎಷ್ಟೇ ಹೇಳಿದರೂ ಹೊಂಬಾಳೆ ಫಿಲ್ಮ್ಸ್ ಮಾತ್ರ ಕಾಂತಾರ 2 ಸಿನಿಮಾಗೆ ತಯಾರಿ ಮಾಡ್ತಿದೆ. ಮೂಲಗಳ ಪ್ರಕಾರ ಇದೇ ಬರುವ ಆಗಸ್ಟ್ 27ರಂದು ಕಾಂತಾರ 2 ಸಿನಿಮಾದ ಮುಹೂರ್ತ ಅಂತ ಸಹ ಹೇಳಲಾಗುತ್ತಿದೆ.
ಇದೀಗ ಜ್ಯುವೆಲ್ಲರಿ ಕಂಪನಿಯೊಂದು ಪಂಜುರ್ಲಿ ದೈವದ ಪದಕವನ್ನು ಹೊಂದಿ ಹಾರವನ್ನು ತಯಾರಿ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಹಾರದ ವಿಡಿಯೋವನ್ನು ಹರಿಬಿಡಲಾಗಿದ್ದು ತುಳುನಾಡಿನ ಜನತೆ ಆಕ್ರೋಶ ಹೊರ ಹಾಕಿದ್ದಾರೆ. ನೆಟ್ಟಿಗರ ಆಕ್ರೋಶ ಕಂಡ ಜ್ಯುವೆಲ್ಲರಿ ಮಳಿಗೆ ಕಮೆಂಟ್ ವಿಭಾಗವನ್ನು ಆಫ್ ಮಾಡಿದೆ. ನಂಬಿಕೆಯು ಮನರಂಜನೆಯಾಗಿ ಬದಲಾದರೆ ಏನಾಗುತ್ತೆ ಅನ್ನೋದಕ್ಕೆ ಈ ಕಾಂತಾರ ಸಿನಿಮಾವೇ ಸಾಕ್ಷಿಯಾಗಿದೆ.