ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾ ಬೀಗರ ಔತಣಕೂಟ ನಾಳೆ ಸಕ್ಕರೆನಾಡು ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಲಿದೆ.
ಅದ್ಧೂರಿಯಾಗಿ ನಡೆದ ಈ ವಿವಾಹ ಮಹೋತ್ಸದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ರಾಜಕೀಯ ಮತ್ತು ಸಿನಿಮಾರಂಗದ ಅನೇಕರ ಗಣ್ಯರು ಆಗಮಿಸಿ, ನವಜೋಡಿಗೆ ಶುಭ ಹಾರೈಸಿದ್ದರು. ಇದೀಗ ಬೀಗರೂಟಕ್ಕೆ ಭರ್ಜರಿ ತಯಾರಿಗಳು ಆರಂಭವಾಗಿದ್ದು, ಮಂಡ್ಯದಲ್ಲೇ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮದುವೆ ಬೀಗರೂಟಕ್ಕೆ ಭರದಿಂದ ಸಿದ್ಧತೆ ನಡೆದಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಸಮೀಪದ ವಿಶಾಲ ಮೈದಾನದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಇದೀಗ ಮೋದಿ ಸಮಾವೇಶ ನಡೆಸಿದ ಸ್ಥಳದಲ್ಲಿಯೇ ಅಭಿ ಮತ್ತು ಅವಿವಾ ಅವರ ಮದುವೆ ಬೀಗರೂಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಗಜ್ಜಲಗೆರೆಯಲ್ಲಿ ಸಿದ್ಧತೆ ಆರಂಭವಾಗಿದ್ದು, ಸುಮಾರು 1 ಲಕ್ಷ ಜನರಿಗೆ ಬೀಗರೂಟ ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಜೂನ್ 16ರ ಶುಕ್ರವಾರದಂದು ನಡೆಯಲಿರುವ ಈ ಬೀಗರ ಊಟಕ್ಖಾಗಿ ಗೆಜ್ಜಲಗೆರೆಯ ಸಮೀಪದ 15 ಎಕರೆ ಜಾಗದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, 50 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ವಿಐಪಿ ಹಾಗೂ ಸಾಮಾನ್ಯ ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೀಗರೂಟಕ್ಕೆ ಬಂದ ಜನರು ವಧು- ವರರಿಗೆ ಶುಭಕೋರಲು ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿ ವೇದಿಕೆ ಅಂತ ಇರೋದಿಲ್ಲ. ಜನರು ಊಟ ಮಾಡುವ ಪಂಕ್ತಿಯಲ್ಲೇ ಸುಮಲತಾ ಅಂಬರೀಶ್, ಅಭಿಷೇಕ್, ಅವಿವಾ ಅವರು ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಂಡ್ಯ ಶೈಲಿಯಲ್ಲಿಯೇ ಬೀಗರ ಊಟ ಕಾರ್ಯಕ್ರಮ ನಡೆಯಲಿದೆ.
ಸ್ಥಳೀಯ ಮೂವರು ಬಾಣಸಿಗರ ನೇತೃತ್ವದಲ್ಲಿ, 50 ಸಾವಿರಕ್ಕೂ ಅಧಿಕ ಮಂದಿಗೆ ಊಟ ಹಾಕಿಸಲು ತಯಾರಿ ನಡೆಸಲಾಗುತ್ತಿದೆ. 7 ಟನ್ ಮಟನ್, 7 ಟನ್ ಚಿಕನ್‌ನಲ್ಲಿ ಅದ್ದೂರಿ ಬಾಡೂಟ ಖಾದ್ಯ ತಯಾರಿಸಲಾಗುತ್ತಿದೆ. ನಾಟಿ ಸ್ಟೈಲ್‌ನಲ್ಲಿಯೆ ಬೀಗರ ಔತಣಕೂಟ ಆಯೋಜಿಸಲು ಅಂಬಿ ಕುಟುಂಬ ಪ್ಲಾನ್ ಮಾಡಿಕೊಂಡಿದೆ. ಊಟದಲ್ಲಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್ ಫ್ರೈ, ಎರಡು ರೀತಿ ಚಿಕನ್ ವೆರೈಟಿ, ಘೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆ ಹಣ್ಣು, ಬೀಡಾ, ನಂದಿನಿ ಐಸ್ ಕ್ರೀಂ ಇರಲಿದೆ.
‘ರೆಬೆಲ್ ಸ್ಟಾರ್’ ಅಂಬರೀಶ್ ಅವರು ಮೂಲತಃ ಮಂಡ್ಯದವರು. ಅವರ ರಾಜಕೀಯ ಜೀವನಕ್ಕೆ ಮಂಡ್ಯದಿAದಲೇ ದೊಡ್ಡ ತಿರುವು ಸಿಕ್ಕಿತ್ತು. ನಂತರ ಅವರ ನಿಧನದ ನಂತರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು. ಹಾಗಾಗಿ, ಮಂಡ್ಯದಲ್ಲಿಯೇ ಅಭಿಷೇಕ್ ಮತ್ತು ಅವಿವಾ ಅವರ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ.