ಅಕ್ರಮವಾಗಿ ದರ್ಗಾ ತೆರವಿಗೆ ನೋಟಿಸ್ : ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಕ್ಕೆ ಬೆಂಕಿ ; ಓರ್ವ ಸಾವು – ಕಹಳೆ ನ್ಯೂಸ್
ಗುಜರಾತ್: ಅಕ್ರಮವಾಗಿ ದರ್ಗಾ ಕಟ್ಟಡವನ್ನು ಕಟ್ಟಿದ ಹಿನ್ನೆಲೆ ತೆರವುಗೊಳಿಸಲು ನೋಟಿಸ್ ನೀಡಲು ಬಂದ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಗುಜರಾತ್ ನ ಜುನಾಗಢ್ ನಲ್ಲಿ ಶುಕ್ರವಾರ (ಜೂ.16 ರಂದು) ರಾತ್ರಿ ನಡೆದಿರುವುದು ವರದಿಯಾಗಿದೆ.
ಜುನಾಗಢ್ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ದರ್ಗಾವನ್ನು ಅಕ್ರಮವಾಗಿ ಕಟ್ಟಲಾಗಿದೆ. ತೆರವುಗೊಳಿಸಲು ಗಡುವು ನೀಡುವ ನೋಟಿಸ್ ನ್ನು ಅಂಟಿಸಲು ಬಂದಿದ್ದಾರೆ. ಈ ವೇಳೆ ಪೊಲೀಸರು ಜೊತೆಯಾಗಿ ಬಂದಿದ್ದಾರೆ. ವಿಚಾರ ತಿಳಿದು ಸುಮಾರು 200-300 ಜನರು ದರ್ಗಾಕ್ಕೆ ಬಂದಿದ್ದಾರೆ.
ಅಧಿಕಾರಿಗಳು ನೋಟಿಸ್ ನೀಡಲು ಬರುವ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ದರ್ಗಾ ತೆರವಿಗೆ ವಿರೋಧ ವ್ಯಕ್ತಪಡಿಸಿ ಜನ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಕ್ರೋಶಗೊಂಡು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟದಿಂದ ಡಿಎಸ್ ಪಿ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 174 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ದರ್ಗಾ ತೆರವು ವಿಚಾರ ಹಿಂಸೆಗೆ ತಿರುಗಿದ್ದು, ಘಟನಾ ಸ್ಥಳಕ್ಕೆ ಇನ್ನಷ್ಟು ಪೊಲೀಸ್ ಪಡೆ ಬಂದು ಆಶ್ರುವಾಯುಗಳನ್ನು ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಿದೆ.
ದರ್ಗಾ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ. ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಿದ್ದರೆ ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ನೀಡಲು 5 ದಿನಗಳ ಗಡುವನ್ನು ಸ್ಥಳೀಯ ಆಡಳಿತ ನೀಡಿದೆ.