ಮಂಗಳೂರು: ಬಂದರು ಶ್ರಮಿಕರ ಸಂಘದ ವತಿಯಿಂದ 45ನೇ ಪೋರ್ಟ್ ವಾರ್ಡಿನ ಹಳೇ ಬಂದರು ಮತ್ತು ಬಾಂಬು ಬಜಾರ್ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಹಳೆ ಬಂದರಿನ ಸಗಟು ಮಾರುಕಟ್ಚೆಯ ಹಮಾಲಿ ಕಾರ್ಮಿಕರು ಕೈಗಾಡಿ ಎಳೆಯುವ ಮೂಲಕ ವಿನೂತನ ಶೈಲಿಯಲ್ಲಿ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್, ಇಂಡಿಯನ್ ಒವರ್ಸೀಸ್ ಬ್ಯಾಂಕ್ ಬಂದರು ಶಾಖೆಯ ಪ್ರಬಂಧಕರಾದ ಸುರೇದ್ರನ್, ಟೆಂಪೋ ಚಾಲಕರ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ರಿಕ್ಷಾ ಚಾಲಕರ ಅಧ್ಯಕ್ಷರಾದ ಗುರುದತ್ ನಾಯಕ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಮತ್ತು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಜ್, ಕೆನರಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಪಿ.ಬಿ ಅಬ್ದುಲ್ ಹಮೀದ್, ಮತ್ತಿತರರು ಉಪಸ್ಥಿತರಿದ್ದರು.
ಈ ರಸ್ತೆ ಅಭಿವೃದ್ದಿಗೆ ಒತ್ತಾಯಿಸಿ ಹಿಂದಿನ ನಗರಾಡಳಿತದ ಅವಧಿಯಲ್ಲಿ ಹಮಾಲಿ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಕೈಗಾಡಿ ಜಾಥಾ ನಡೆಸಿ ನಗರಪಾಲಿಕೆಗೆ ಕೈಗಾಡಿ ಚಲೋ ಮಾಡಿ ಪ್ರತಿಭಟನೆ ನಡೆಸಿದ್ದರು. ಅಬ್ದುಲ್ ಲತೀಫ್ ಅವರು ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡ ನಂತರ ಕಾರ್ಮಿಕರಿಗೆ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದ್ದರು.
ಕೊಟ್ಟ ಭರವಸೆಯಂತೆ ರಸ್ತೆ ನಿರ್ಮಿಸಲು ಶ್ರಮಿಸಿದ ಕಾರ್ಮಿಕರಿಗೆ ಕೊಟ್ಟ ಮಾತು ಉಳಿಸಿಕೊಟ್ಟ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಅವರನ್ನು ಕೈಗಾಡಿಯಲ್ಲಿ ಕೂರಿಸಿ ಸನ್ಮಾನಿಸಿ ಮೆರವಣಿಗೆ ನಡೆಸಿದರು. ಕಾರ್ಮಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.