ಗೋಳಗುಮ್ಮಟ ವೀಕ್ಷಣೆಗೆ ಬಂದ ನಾರಿ ‘ಶಕ್ತಿ’: ಒಂದೇ ದಿನಕ್ಕೆ 5 ಸಾವಿರ ಟಿಕೆಟ್ ಸೇಲ್… ₹ 1.25 ಲಕ್ಷ ಸಂಗ್ರಹ –ಕಹಳೆ ನ್ಯೂಸ್
ವಿಜಯಪುರ: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಹಿನ್ನಲೆಯಲ್ಲಿ ಮಹಿಳೆಯರು ಕುಟುಂಬ ಸಮೇತ ಪ್ರವಾಸಿ ತಾಣಗಳತ್ತ ದೌಡಾಯಿಸುತ್ತಿದ್ದಾರೆ.
ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಭಾನುವಾರ ಮಹಿಳೆಯರ ದಂಡೇ ಹರಿದು ಬಂದಿದೆ. ಇದರಿಂದ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ವೀಕ್ಷಣೆಗೆ ಟಿಕೆಟ್ಗಾಗಿ ನೂಕುನುಗ್ಗಲು ಉಂಟಾಗಿತ್ತು.
ಬೆಳಗ್ಗೆ 8 ಗಂಟೆಯಿಂದ ಮಹಿಳೆಯರು ತಮ್ಮ ಮಕ್ಕಳ ಜತೆ ಆಗಮಿಸಿ ಗೋಳಗುಮ್ಮಟ ವೀಕ್ಷಣೆ ಮಾಡಲು ಮುಗಿಬಿದ್ದಿದ್ದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸುಮಾರು 5 ಸಾವಿರ ಜನ ಟಿಕೆಟ್ ಪಡೆದು ಗೋಳಗುಮ್ಮಟ ವೀಕ್ಷಣೆ ಮಾಡಿದ್ದಾರೆ. ಭಾನುವಾರ ಸುಮಾರು 1.25 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಕಳೆದ ಐದು ವರ್ಷದಲ್ಲಿ ಒಂದೇ ದಿನ ಇಷ್ಟೊಂದು ಪ್ರವಾಸಿಗರು ಬಂದಿರುವುದು ಇದೇ ಮೊದಲು ಎನ್ನುತ್ತಾರೆ ಪುರಾತತ್ವ ಇಲಾಖೆ ಅಧಿಕಾರಿಗಳು.
ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಪ್ರವಾಸ ಹೆಚ್ಚಳ: ವೀಕೆಂಡ್ ರಜೆ ಇರುವ ಕಾರಣ ದೂರದ ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯಿಂದ ಮಹಿಳೆಯರು ವಿಜಯಪುರ ಪ್ರವಾಸ ಕೈಗೊಂಡಿದ್ದಾರೆ. ಶಕ್ತಿ ಯೋಜನೆಯಡಿ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇರುವ ಕಾರಣ ವಾರದಿಂದ ಮಹಿಳೆಯರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಹಂಪಿ ಸೇರಿದಂತೆ ನಾನಾ ದೇವಸ್ಥಾನ, ಪ್ರವಾಸಿತಾಣಗಳನ್ನು ವೀಕ್ಷಿಸಿ ವಿಜಯಪುರ ನಗರಕ್ಕೆ ಆಗಮಿಸಿದ್ದರು.
ಗೋಳಗುಮ್ಮಟ ನೋಡುವ ತವಕದಲ್ಲಿದ್ದ ಮಹಿಳೆಯರು ವೀಕ್ಷಣೆ ಮಾಡಿದ ನಂತರ, ತಮ್ಮ ಸಂತಸ ಕ್ಷಣಗಳನ್ನು ಹಲವು ಕಡೆ ಹಂಚಿಕೊಂಡರು. ಕೆಲ ಮಹಿಳೆಯರಂತೂ ಗೋಳಗುಮ್ಮಟ ವೀಕ್ಷಣೆಗೂ ಫ್ರೀ ಎಂದು ಭದ್ರತಾ ಸಿಬ್ಬಂದಿ ಜತೆ ವಾಗ್ವಾದಕ್ಕೆ ನಿಂತ ಪ್ರಸಂಗ ಸಹ ಕಂಡು ಬಂತು. ಮಹಿಳೆಯರು ಎಲ್ಲೇ ಹೋದರೂ ಸಹ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದು ರೂಢಿ. ಅದರಂತೆ ಇಂದು ಗೋಳಗುಮ್ಮಟಕ್ಕೆ ಆಗಮಿಸಿದ್ದ ಮಹಿಳೆಯರು ತಮ್ಮ ಮಕ್ಕಳ ಜತೆ ಆಗಮಿಸಿದ್ದರು. ಹೀಗಾಗಿ ಗೋಳಗುಮ್ಮಟ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿತ್ತು.
ವಾಹನ ಪಾರ್ಕಿಂಗ್ಗೆ ವ್ಯವಸ್ಥೆ: ರಾಜ್ಯದಲ್ಲಿ ಫ್ರೀ ಬಸ್ ವ್ಯವಸ್ಥೆ ಇರುವದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇವರ ಜತೆ ಮಹಾರಾಷ್ಟ್ರದಿಂದ ಕಾರು, ಟ್ರ್ಯಾಕ್ಸ್ ಮಾಡಿಕೊಂಡು ಬಂದವರ ಸಂಖ್ಯೆಯೂ ಸಹ ಹೆಚ್ಚಾಗಿತ್ತು. ಅದಕ್ಕೆ ವಾಹನ ನಿಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು.