Tuesday, November 26, 2024
ಸುದ್ದಿ

ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ವಾಪಸ್ ಪಡೆದ ರಾಜ್ಯ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ಖಂಡನೀಯ: ವೀಣಾ ಎಸ್. ಶೆಟ್ಟಿ – ಕಹಳೆ ನ್ಯೂಸ್

ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆಗೆ ಈ ಹಿಂದೆ ಬಿಜೆಪಿ ಸರಕಾರ ತಂದಿರುವ ತಿದ್ದುಪಡಿಯನ್ನು ವಾಪಾಸು ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಸಮಾಜದಲ್ಲಿ ಲವ್ ಜಿಹಾದ್ ಮತ್ತು ಆಮಿಷದ ಮುಖಾಂತರ ಮೋಸದ ಮತಾಂತರ ಅವ್ಯಾಹತವಾಗಿ ನಡೆಯುತ್ತಿದ್ದು ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ವಾಪಾಸು ಪಡೆಯುವ ಮೂಲಕ ಮತಾಂತರವನ್ನೇ ಕಾಯಕವನ್ನಾಗಿಸಿಕೊಂಡಿರುವ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ಪುರುಷರಾದ ವೀರ ಸಾವರ್ಕರ್, ಹೆಡಗೇವಾರ್ ರವರ ಜೀವನಾದರ್ಶವನ್ನು ಸಾರುವ ಪಠ್ಯವನ್ನು ಕೈಬಿಟ್ಟಿರುವುದು ಒಂದೇ ವರ್ಗದ ಓಲೈಕೆಯ ರಾಜಕಾರಣವಾಗಿದೆ. ಆದರೂ ಈ ಪ್ರಕ್ರಿಯೆಯಿಂದ ಇಂತಹ ಮಹಾನ್ ಪುರುಷರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಅರಿತುಕೊಳ್ಳಲು ಮುಂದಾಗುವುದು ಖಂಡಿತ ಎಂದು ಅವರು ತಿಳಿಸಿದ್ದಾರೆ.

ನಕಲಿ ಗ್ಯಾರಂಟಿ ಕಾರ್ಡುಗಳನ್ನು ವಿತರಿಸುವ ಮೂಲಕ ರಾಜ್ಯದ ಜನತೆಯನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಜನ ವಿರೋಧಿ ಕಾಂಗ್ರೆಸ್ ಜನತೆಗೆ ನೀಡಿರುವ ಉಚಿತಗಳ ವಾಗ್ದಾನವನ್ನು ಪೂರೈಸದೆ ಪಂಗನಾಮ ಹಾಕಿದೆ. 200 ಯುನಿಟ್ ಉಚಿತ ವಿದ್ಯುತ್ ಎಂದು ಡಂಗುರ ಸಾರಿದ್ದ ಕಾಂಗ್ರೆಸ್ ಇದೀಗ ದಿಡೀರಾಗಿ ವಿದ್ಯುತ್ ದರವನ್ನು ಏರಿಸುವ ಮೂಲಕ ರಾಜ್ಯದ ಜನತೆಗೆ ಶಾಕ್ ನೀಡಿದೆ. ಕೇಂದ್ರ ಸರಕಾರ ನೀಡುವ 5 ಕೆ.ಜಿ. ಉಚಿತ ಅಕ್ಕಿ ಸಹಿತ ಹೆಚ್ಚುವರಿ 10 ಕೆ.ಜಿ. ಉಚಿತ ಅಕ್ಕಿ ನೀಡುತ್ತೇನೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಬೂಬು ಹೇಳುತ್ತಾ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಸರಕಾರಿ ಬಸ್ ಪ್ರಯಾಣದಿಂದ ಆಟೋ, ಟ್ಯಾಕ್ಸಿ ಚಾಲಕರ ಸಹಿತ ಖಾಸಗಿ ಬಸ್ ಮಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಮನೆ ಒಡತಿಗೆ 2,000 ಫ್ರೀ ಎಂದಿರುವ ಕಾಂಗ್ರೆಸ್ ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟು ಏನನ್ನೂ ಮಾಡದೆ ಕೈಚೆಲ್ಲಿ ಕುಳಿತಿದೆ. ನಿರುದ್ಯೋಗಿ ಪದವೀಧರಿಗೆ ಯುವಕರಿಗೆ 3,000 ಮಾಸಾಶನ ಉಚಿತ ಎಂದಿರುವ ಕಾಂಗ್ರೆಸ್ ಇದೀಗ ಪ್ರಸಕ್ತ ಸಾಲಿನಲ್ಲಿ ತೇರ್ಗಡೆಯಾದ ಪದವೀದರರು ಮಾತ್ರ ಅರ್ಹರು ಎಂದು ರಾಗ ಬದಲಿಸಿದೆ.

ಈ ಎಲ್ಲಾ ವೈಫಲ್ಯಗಳ ಹಿನ್ನೆಲೆಯಲ್ಲಿ ಮಾತು ತಪ್ಪಿದ ಕಾಂಗ್ರೆಸ್ ಸರಕಾರ ಉಚಿತಗಳ ಗ್ಯಾರಂಟಿಗಳನ್ನೂ ಪೂರೈಸದೆ, ಅಭಿವೃದ್ಧಿಯ ಗೊಡವೆಗೂ ಹೋಗದೆ, ರಾಜ್ಯವನ್ನು ದಿವಾಳಿಯ ಅಂಚಿನತ್ತ ಕೊಂಡೊಯ್ಯುವುದು ನಿಶ್ಚಿತ ಎಂದು ವೀಣಾ ಎಸ್. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.