ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ; 1 ರೂಪಾಯಿಯನ್ನೂ ತೆಗೆದುಕೊಳ್ಳದೇ ನಿರಪರಾಧಿಗೆ ನ್ಯಾಯ ಕೊಡಿಸಿದ ನ್ಯಾಯವಾದಿಗಳು – ಕಹಳೆ ನ್ಯೂಸ್
ಕೊನೆಗೂ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರಪರಾಧಿಗೆ ನ್ಯಾಯ ಸಿಕ್ಕಿದೆ. ಸಂತೋಷ್ ರಾವ್ ಸುಮಾರು 11 ವರ್ಷಗಳ ಕಾಲ ಅನುಭವಿಸಿದ್ದ ಜೈಲು ಶಿಕ್ಷೆಯಿಂದ ಕೊನೆಗೂ ಮುಕ್ತಿ ದೊರಕಿದೆ. 1 ರೂಪಾಯಿಯನ್ನೂ ತೆಗೆದುಕೊಳ್ಳದೇ ನಿರಪರಾಧಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದ ಪುತ್ತೂರು ಮೂಲದ ಮೋಹಿತ್ ಕುಮಾರ್ ಹಾಗೂ ನವೀನ್ ಕುಮಾರ್ ಪದ್ಯಾಣ ಅವರಿಗೆ ಎಲ್ಲೆಡೆಯಿಂದಲೂ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗುತ್ತಿದೆ.
2012ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ (17 ವರ್ಷ) ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್‌ನನ್ನು ಕೋರ್ಟ್ ದೋಷಮುಕ್ತಗೊಳಿಸಿದೆ. ಬೆಂಗಳೂರಿನ ಸಿಬಿಐ ಕೋರ್ಟ್ 11 ವರ್ಷಗಳ ಬಳಿಕ ತೀರ್ಪು ನೀಡಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್.ಸಿ.ಬಿ. ಮಹತ್ವದ ತೀರ್ಪು ಪ್ರಕಟಿಸಿದ್ದರು. ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಆರೋಪಿ ಪರ ವಕೀಲ ಮೋಹಿತ್ ಕುಮಾರ್ ವಾದ ಮಂಡಿಸಿದ್ದರು. ಇವರಿಗೆ ಸಹಾಯ ಮಾಡಿದ್ದು ವಿಟ್ಲ ಮೂಲದ ಬೆಂಗಳೂರಿನ ನ್ಯಾಯವಾದಿ ನವೀನ್ ಕುಮಾರ್ ಪದ್ಯಾಣ.
ಆತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಎರಡು ದಿನ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಸೌಜನ್ಯ ಮೃತಪಟ್ಟ ದಿನ ಭಾರೀ ಮಳೆ ಇತ್ತು. ಅಂದು 500 ಜನ ಹುಡುಕಾಟ ನಡೆಸಿದ್ದರು. ಆದರೆ ಅಂದು ಶವ ಪತ್ತೆಯಾಗಿರಲಿಲ್ಲ. ನದಿ ದಾಟಿ ಹೋಗಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ ಪೊಲೀಸರು ಎರಡು ದಿನದ ಬಳಿಕ ಸಂತೋಷ್ ರಾವ್‌ನನ್ನು ಬಂಧಿಸಿದ್ದರು. ಪ್ರಕೃತಿ ಚಿಕಿತ್ಸಾಲಯ ಸಿಸಿಟಿವಿ ಸಂಗ್ರಹಿಸಿಲ್ಲ ಎಂದು ನ್ಯಾಯವಾದಿಗಳು ತಮ್ಮ ವಾದವನ್ನು ಮಂಡಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ರಾತ್ರೋರಾತ್ರಿ ಕೆಟ್ಟ ಬೆಳಕಿನಲ್ಲಿ ಮಾಡಲಾಗಿದೆ. ಸಂತೋಷ್ ರಾವ್ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಹೇಮಂತ್ ವಾದಿಸಿದ್ದರು. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ 2012ರ ಅ.9 ರಂದು ಕಾಣೆಯಾಗಿದ್ದಳು. ಆಕೆಯ ತಂದೆ ಚಂದ್ರಪ್ಪಗೌಡ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅ.10 ರಂದು ಸೌಜನ್ಯಾ ಶವ ಪತ್ತೆಯಾಗಿತ್ತು. ಆಕೆಯನ್ನು ಭಯಾನಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆದರೆ ಮಾಡಿದವ ಅಮಾಯಕ ಸಂತೋಷ್ ಅಲ್ಲ ಅನ್ನೋದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.
ಅಮಾಯಕ ಸಂತೋಷ್ ಸೌಜನ್ಯ ಅತ್ಯಾಚಾರಿ ಅಂತ ಫ್ರೂ ಮಾಡುವಲ್ಲಿ ಸಾಕ್ಷ್ಯದರಗಳನ್ನು ಒದಗಿಸುವಲ್ಲಿ ದೇಶದ ಪ್ರಮುಖ ತನಿಖಾ ತಂಡ ಸಿಬಿಐಗೆ ಸಾಧ್ಯವಾಗಿಲ್ಲ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಎನಿಸಿಕೊಂಡಿದ್ದ ಸಂತೋಷ್ ಪರ ವಾದ ಮಂಡಿಸಲು ಯಾರೂ ಮುಂದೆ ಬಾರದೇ ಇದ್ದಾಗ ಪುತ್ತೂರಿನ ಯುವ ವಕೀಲ ಮೋಹಿತ್ ಹಾಗೂ ನವೀನ್ ಪದ್ಯಾಣ ಅವರು ನಿರಪರಾಧಿಗೆ ನ್ಯಾಯ ಕೊಡಿಸಲು ಮುಂದೆ ಬಂದಿದ್ದರು. ಸುಮಾರು 11 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದು ನ್ಯಾಯ ಕೊಡಿಸಿದ್ದರೂ ಕೂಡ ಯಾರಿಂದಲೂ ಒಂದು ರೂಪಾಯಿ ಹಣವನ್ನೂ ತೆಗೆದುಕೊಂಡಿಲ್ಲ. ಯುವ ವಕೀಲರ ಕಾರ್ಯ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.