ಕಾಂಗ್ರೆಸ್ ಸುಳ್ಳ, ಮಳ್ಳ ಸರಕಾರ : ಧಮ್ ಇದ್ರೆ ರಾಜ್ಯದ ಜನರಿಗೆ 15ಕೆಜಿ ಅಕ್ಕಿ ಕೊಡಲಿ; ಬೊಮ್ಮಾಯಿ ಸವಾಲ್ –ಕಹಳೆ ನ್ಯೂಸ್
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇಂದು ಹೋರಾಟ ನಡೆಸಿದ್ದಾರೆ. ಬೆಂಗಳೂರು ನಗರದ ಮೌರ್ಯ ಸರ್ಕಲ್ ಬಳಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೌರ್ಯ ಸರ್ಕಲ್‌ಗೆ ಆಗಮಿಸಿ, ಕಾಂಗ್ರೆಸ್ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದೊಂದು ಸುಳ್ಳ, ಮಳ್ಳ ಸರ್ಕಾರವಾಗಿದ್ದು, ಸುಳ್ಳು ಹೇಳುವಂತಹದ್ದು ಮತ್ತು ಮಳ್ಳನ ರೀತಿಯಲ್ಲಿ ಮೋಸ ಮಾಡುವಂತಹ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರಕಾರ ಎಂದು ಕಿಡಿಕಾರಿದರು.
ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುತ್ತೇವೆ ಅಂದಿದ್ರು. ಕಾಂಗ್ರೆಸ್ ನಾಯಕರ ಕೈಯಲ್ಲಿ 1 ಕೆಜಿ ಅಕ್ಕಿ ಕೊಡುವುದಕ್ಕೆ ಆಗಿಲ್ಲ. ಈಗ ರಾಜ್ಯದ ಜನರಿಗೆ ಸಿಗುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಕೊಡುತ್ತಿರುವ ಅಕ್ಕಿ. 10 ಕೆಜಿ ಅಕ್ಕಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಮೋದಿ ಕೊಟ್ಟಿದ್ದಾರೆ. ಸುಳ್ಳು ಕಾಂಗ್ರೆಸ್ಸಿನ ಪಾಠ ನಾವು ಕಲಿಯಬೇಕಾಗಿಲ್ಲ ಎಂದು ಬೊಮ್ಮಾಯಿ ಗುಡುಗಿದ್ದಾರೆ.
ಇನ್ನು, ಸುಳ್ಳು ಗ್ಯಾರಂಟಿ ಜೊತೆಗೆ ಕಂಡೀಷನ್ ಬೇರೆ ಸರ್ಕಾರ ರಚನೆಯಾದ ಮೊದಲ ಸುದ್ದಿಗೋಷ್ಟಿಯಲ್ಲೇ ತಾತ್ವಿಕ ಒಪ್ಪಿಗೆ ಅಂದ್ರಿ. ಅಂದೇ ನಮಗೆ ಗೊತ್ತಿತ್ತು. ನಿಮ್ಮ ಬಳಿ ಅಕ್ಕಿ ಇಲ್ಲ ಎಂದು. ನಿಮಗೆ ತಾಕತ್ತು, ಧಮ್ ಇದ್ರೆ 10+5 ಕೆಜಿ ಅಕ್ಕಿ ಕೊಡಬೇಕು. ಎಂದು ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಎಸಗಿದ್ದಾರೆ.